---Advertisement---

ಬೀದರ್: 99 ಲಕ್ಷ ಸಾಲ ವಾಪಸ್ ನೀಡಿಲ್ಲ ಆರೋಪ: ಬಸವಕಲ್ಯಾಣ ಶಾಸಕ ಶರಣು ಸಲಗರ್ ವಿರುದ್ಧ ಎಫ್‌ಐಆರ್!!

On: December 29, 2025 9:30 AM
Follow Us:
---Advertisement---

ವಿಧಾನಸಭೆ ಚುನಾವಣೆಯ ಸಮಯದಲ್ಲಿ ಪಡೆದಿದ್ದ 99 ಲಕ್ಷ ರೂ. ಹಣವನ್ನು ಮರುಪಾವತಿ ಮಾಡದೆ ಮೋಸ ಮಾಡಿದ್ದಾರೆ ಎಂಬ ಆರೋಪದಡಿ ಬಸವಕಲ್ಯಾಣ ಶಾಸಕ ಶರಣು ಸಲಗರ್ ವಿರುದ್ಧ ಪ್ರಕರಣ ದಾಖಲಾಗಿದೆ. ಬಸವಕಲ್ಯಾಣ ನಗರದ ಜೈ ಶಂಕರ್ ಕಾಲೋನಿಯ ನಿವಾಸಿ ಸಂಜುಕುಮಾರ್ ಸುಗುರೆ ಅವರು ಈ ಕುರಿತು ದೂರು ಸಲ್ಲಿಸಿದ್ದು, ಬೆಂಗಳೂರಿನ ಎ.ಸಿ.ಜೆ.ಎಂ ನ್ಯಾಯಾಲಯದ ಆದೇಶದಂತೆ ಶನಿವಾರ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ದೂರುದಾರರ ಪ್ರಕಾರ, 2023ರ ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದ ಸಂದರ್ಭದಲ್ಲಿ, ಜನವರಿ ತಿಂಗಳಿಂದ ಫೆಬ್ರವರಿ ಎರಡನೇ ವಾರದವರೆಗೆ ಶರಣು ಸಲಗರ್ ಅವರಿಗೆ ಒಟ್ಟು 99 ಲಕ್ಷ ರೂ. ಮೊತ್ತವನ್ನು ಮುಂಗಡವಾಗಿ ಸಾಲವಾಗಿ ನೀಡಲಾಗಿತ್ತು. ಆ ಹಣವನ್ನು ಆರು ತಿಂಗಳೊಳಗೆ ಮರಳಿಸುವುದಾಗಿ ಶಾಸಕರು ಭರವಸೆ ನೀಡಿದ್ದರು. ಆದರೆ ನಿಗದಿತ ಅವಧಿ ಕಳೆದರೂ ಹಣವನ್ನು ವಾಪಸ್ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

ಈ ಹಿಂದೆ ಕೂಡ ಶಾಸಕರು ದೂರುದಾರರಿಂದ ಹಲವು ಬಾರಿ ಹಣ ಪಡೆದು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಿದ್ದ ಕಾರಣ, ಅದೇ ನಂಬಿಕೆಯಿಂದ ಈ ಬಾರಿ ಕೂಡ ದೊಡ್ಡ ಮೊತ್ತದ ಸಾಲವನ್ನು ನೀಡಲಾಗಿತ್ತು. ದೂರುದಾರ ಮತ್ತು ಶಾಸಕ ಶರಣು ಸಲಗರ್ ದೂರದ ಸಂಬಂಧಿಗಳಾಗಿದ್ದು, ಆ ಸಂಬಂಧ ಹಾಗೂ ನಂಬಿಕೆಯ ಆಧಾರದ ಮೇಲೆ ಹಣದ ಸಹಾಯ ಮಾಡಲಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆದರೆ ಹಣ ಮರಳಿ ಕೇಳಿದರೂ ಹಲವು ದಿನಗಳವರೆಗೆ ಸತಾಯಿಸಲಾಗಿದ್ದು, ಕೊನೆಗೆ ಸೆಪ್ಟೆಂಬರ್ 14ರಂದು ಹಿರಿಯರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಹಣ ನೀಡುವುದಾಗಿ ಒಪ್ಪಿಕೊಂಡು ಶಾಸಕರು ಒಂದು ಚೆಕ್ ನೀಡಿದ್ದರು. ಆದರೆ ಆ ಚೆಕ್ ಅನ್ನು ಬ್ಯಾಂಕ್‌ಗೆ ಸಲ್ಲಿಸಿದಾಗ, ಸಂಬಂಧಿತ ಖಾತೆಯೇ ಮುಚ್ಚಿರುವುದು ತಿಳಿದುಬಂದಿದೆ ಎಂದು ಆರೋಪಿಸಲಾಗಿದೆ.

ಹಣ ವಾಪಸ್ ಪಡೆಯಲು ದೂರುದಾರರ ಪತ್ನಿ ಹಾಗೂ ಪುತ್ರರು ಶಾಸಕರ ಮನೆಗೆ ತೆರಳಿದಾಗ, ಹಣ ನೀಡದೇ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಲಾಗಿದೆ ಎಂಬ ಗಂಭೀರ ಆರೋಪವೂ ದೂರಿನಲ್ಲಿ ಇದೆ.

ಶಾಸಕರು ಮೊದಲಿನಿಂದಲೂ ಮೋಸ ಮಾಡುವ ಉದ್ದೇಶದಿಂದಲೇ ಈ ರೀತಿ ವರ್ತಿಸಿದ್ದಾರೆ ಎಂದು ದೂರುದಾರ ಆರೋಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಬಿ.ಎನ್.ಎಸ್ 2023ರ ಸೆಕ್ಷನ್‌ಗಳು 74, 109, 314(4), 318, 351 ಹಾಗೂ 352ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ತನಿಖೆ ಮುಂದುವರಿದಿದೆ.

krutika naik

Krutika Naik is an editor and writer at Karnataka Stories, where she covers culture, local news, and inspiring voices from across the state. With a passion for storytelling and a keen eye for detail, Krutika brings real stories to life—one article at a time.

Join WhatsApp

Join Now

RELATED POSTS

Leave a Comment