ಮೈಸೂರು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನೊಬ್ಬರು ತಮ್ಮೊಂದಿಗೆ ಬೆಕ್ಕಿನ ಮರಿಯನ್ನು ಕರೆದೊಯ್ದ ಸಂದರ್ಭದಲ್ಲಿ, ಅದಕ್ಕೂ ನಿರ್ವಾಹಕರು ಆಫ್ ಟಿಕೆಟ್ ನೀಡಿದ ಘಟನೆ ಮೈಸೂರು–ಮಡಿಕೇರಿ ಮಾರ್ಗದಲ್ಲಿ ನಡೆದಿದೆ.
ಮೈಸೂರುದಿಂದ ಮಡಿಕೇರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಕನೊಬ್ಬರು ಬೆಕ್ಕಿನ ಮರಿಯನ್ನು ಜೊತೆ ಕರೆದುಕೊಂಡು ಹೋಗಿದ್ದರು. ಈ ವೇಳೆ ನಿರ್ವಾಹಕರು ಬೆಕ್ಕಿನ ಮರಿಗೆ ಟಿಕೆಟ್ ಕೇಳಿ, ಆಫ್ ಟಿಕೆಟ್ ನೀಡಿದ್ದು ಪ್ರಯಾಣಿಕರನ್ನು ಅಚ್ಚರಿಗೊಳಿಸಿದೆ.
ಈ ಘಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಬಳಕೆದಾರರೊಬ್ಬರು, “ಅದು ಬೆಕ್ಕಿನ ಮರಿ ಆಗಲಿ, ಮಕ್ಕಳು ಆಗಲಿ—ಆಫ್ ಟಿಕೆಟ್ ತೆಗೆದುಕೊಳ್ಳಬೇಕು ಎಂದು ನಿರ್ವಾಹಕರು ಹೇಳಿದ್ದಾರೆ. ಈಗ ಬೆಕ್ಕಿಗೆ ‘ಕ್ಯಾಟ್ ಪಾಸ್’ ಮಾಡಬೇಕೇ? ಹಣ ತೆಗೆದುಕೊಂಡು ಸೀಟು ಕೂಡ ನೀಡಿಲ್ಲ. ಇದು ನ್ಯಾಯವೇ?” ಎಂದು ಪ್ರಶ್ನಿಸಿದ್ದಾರೆ.
ಸಂಬಂಧಿತ ಪೋಸ್ಟ್‌ನಲ್ಲಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರನ್ನು ಟ್ಯಾಗ್ ಮಾಡಲಾಗಿದ್ದು, ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.






