---Advertisement---

ನಿವೃತ್ತಿ ನಿರ್ಧಾರದಿಂದ ಹಿಂದೆ ಸರಿದ ವಿನೇಶ್ ಫೋಗಟ್; ಮತ್ತೆ ಕುಸ್ತಿ ಅಖಾಡಕ್ಕೆ ಇಳಿಯಲು ಸಜ್ಜು

On: December 29, 2025 2:34 AM
Follow Us:
---Advertisement---

ನವದೆಹಲಿ:

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ತೂಕದ ಕಾರಣದಿಂದ ಪದಕ ವಂಚಿತರಾಗಿ ನಿವೃತ್ತಿ ಘೋಷಿಸಿದ್ದ ಭಾರತೀಯ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್ ಇದೀಗ ತಮ್ಮ ನಿರ್ಧಾರವನ್ನು ಬದಲಿಸಿಕೊಂಡಿದ್ದಾರೆ. “ನನ್ನೊಳಗಿನ ಬೆಂಕಿ ಇನ್ನೂ ಆರಿಲ್ಲ” ಎಂದು ಹೇಳಿರುವ ಅವರು, 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಗುರಿಯಾಗಿಸಿಕೊಂಡು ಮತ್ತೆ ಕುಸ್ತಿ ಅಖಾಡಕ್ಕಿಳಿಯಲು ಸಿದ್ಧರಾಗಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 50 ಕೆಜಿ ವಿಭಾಗದಲ್ಲಿ ಫೈನಲ್‌ಗೆ ಅರ್ಹತೆ ಪಡೆದಿದ್ದ ವಿನೇಶ್, ಫೈನಲ್‌ಗೆ ಕೆಲವೇ ಗಂಟೆಗಳ ಮುನ್ನ ಅಧಿಕ ತೂಕ ಪತ್ತೆಯಾದ ಹಿನ್ನೆಲೆಯಲ್ಲಿ ಅನರ್ಹಗೊಂಡಿದ್ದರು. ಇದರಿಂದ ಖಚಿತ ಪದಕ ಕೈ ತಪ್ಪಿದ್ದು, ತೀವ್ರ ನಿರಾಶೆಯಲ್ಲೇ ಅವರು ಕ್ರೀಡೆಯಿಂದ ನಿವೃತ್ತಿ ಘೋಷಿಸಿದ್ದರು. ಆ ನಿರ್ಧಾರವನ್ನು ಇದೀಗ ಹಿಂತೆಗೆದುಕೊಂಡಿದ್ದಾರೆ.

ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿರುವ ವಿನೇಶ್ ಫೋಗಟ್, “ಪ್ಯಾರಿಸ್ ಒಲಿಂಪಿಕ್ಸ್ ನನ್ನ ಕೊನೆಯ ಪ್ರಯಾಣವೇ ಎಂದು ಹಲವರು ಕೇಳಿದ್ದರು. ಆ ಪ್ರಶ್ನೆಗೆ ನನಗೂ ಉತ್ತರ ಇರಲಿಲ್ಲ. ನಾನು ಒತ್ತಡ, ನಿರೀಕ್ಷೆಗಳು ಮತ್ತು ಕನಸುಗಳಿಂದ ಸ್ವಲ್ಪ ದೂರ ಸರಿದು ನನ್ನ ಜೀವನವನ್ನು ಮರುಪರಿಶೀಲಿಸಿದೆ. ಆದರೆ ಸ್ಪರ್ಧೆಯ ಮೇಲಿನ ಪ್ರೀತಿ ಎಂದಿಗೂ ಕಡಿಮೆಯಾಗಲಿಲ್ಲ. ಮೌನದಲ್ಲಿ ನಾನು ಮರೆತಿದ್ದ ಸಂಗತಿಯನ್ನು ಕಂಡುಕೊಂಡೆ — ಬೆಂಕಿ ಎಂದಿಗೂ ಆರಲ್ಲ” ಎಂದು ಬರೆದುಕೊಂಡಿದ್ದಾರೆ.

ಇನ್ನೂ ಮುಂದೆ ಮಾತನಾಡಿದ ಅವರು, “ಶಿಸ್ತು, ದಿನಚರಿ ಮತ್ತು ಹೋರಾಟ ನನ್ನ ಬದುಕಿನ ಭಾಗ. ನಾನು ಎಷ್ಟೇ ದೂರ ಹೋದರೂ ನನ್ನ ಒಂದು ಭಾಗ ಅಖಾಡದಲ್ಲೇ ಉಳಿದಿದೆ. ಹಾಗಾಗಿ ನಿರ್ಭೀತ ಮನಸ್ಸಿನಿಂದ ಲಾಸ್ ಏಂಜಲೀಸ್ ಒಲಿಂಪಿಕ್ಸ್ 2028 ಗೆ ತಯಾರಿ ಆರಂಭಿಸುತ್ತಿದ್ದೇನೆ. ಈ ಬಾರಿ ನನ್ನ ಮಗನ ಬೆಂಬಲವೂ ನನ್ನೊಂದಿಗೆ ಇರುತ್ತದೆ” ಎಂದು ಹೇಳಿದ್ದಾರೆ.

ವಾಸ್ತವವಾಗಿ ಈ ವರ್ಷದ ಆಗಸ್ಟ್‌ನಲ್ಲಿ ಕ್ರೀಡೆಯಿಂದ ದೂರ ಸರಿದು ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಿದ್ದ ವಿನೇಶ್, ಇದೀಗ ಮತ್ತೊಮ್ಮೆ ಕ್ರೀಡಾ ವೃತ್ತಿಗೆ ಮರಳುವ ನಿರ್ಧಾರ ಕೈಗೊಂಡಿದ್ದಾರೆ. ರಿಯೋ ಮತ್ತು ಟೋಕಿಯೊ ಒಲಿಂಪಿಕ್ಸ್‌ಗಳಲ್ಲಿ ಭಾಗವಹಿಸಿದ್ದರೂ ಪದಕ ಗೆಲ್ಲಲು ವಿಫಲರಾಗಿದ್ದ ವಿನೇಶ್ ಫೋಗಟ್, ಈ ಬಾರಿ ತಮ್ಮ ಒಲಿಂಪಿಕ್ ಪದಕದ ಕನಸನ್ನು ಸಾಕಾರಗೊಳಿಸುವ ಉದ್ದೇಶದೊಂದಿಗೆ ಮತ್ತೆ ಕಣಕ್ಕೆ ಇಳಿಯುತ್ತಿದ್ದಾರೆ.

Join WhatsApp

Join Now

RELATED POSTS