ಕೊಪ್ಪಳ (ಡಿ.27): ಕೊಪ್ಪಳ ತಾಲೂಕಿನ ಬಹದ್ದೂರಬಂಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಬೀರಪ್ಪ ಅಂಡಗಿ ಅವರು ಸ್ವಂತ ಖರ್ಚಿನಲ್ಲಿ 24 ವಿದ್ಯಾರ್ಥಿಗಳಿಗೆ ವಿಮಾನ ಪ್ರಯಾಣದ ಅನುಭವ ಕಲ್ಪಿಸಿ ಮಾದರಿ ಕಾರ್ಯ ಮಾಡಿದ್ದಾರೆ.
ಶುಕ್ರವಾರ ಜಿಂದಾಲ್ ವಿಮಾನ ನಿಲ್ದಾಣದಿಂದ 24 ವಿದ್ಯಾರ್ಥಿಗಳು ಸೇರಿದಂತೆ ಶಾಲಾ ಶಿಕ್ಷಕರು, ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಸದಸ್ಯರು ಸೇರಿ ಸುಮಾರು 40 ಮಂದಿ ಬೆಂಗಳೂರಿಗೆ ವಿಮಾನದ ಮೂಲಕ ಪ್ರಯಾಣಿಸಿದರು. ಮೊದಲ ಬಾರಿ ವಿಮಾನದಲ್ಲಿ ಪ್ರಯಾಣಿಸಿದ ವಿದ್ಯಾರ್ಥಿಗಳ ಸಂಭ್ರಮ ಮುಗಿಲು ಮುಟ್ಟಿದ್ದು, ಅಪರೂಪದ ಅನುಭವಕ್ಕೆ ಮಕ್ಕಳು ಖುಷಿ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಿಗೆ ಈ ಅವಕಾಶ ಕಲ್ಪಿಸುವ ಉದ್ದೇಶದಿಂದ ಬೀರಪ್ಪ ಅಂಡಗಿ ಅವರು ಕಳೆದ ಏಪ್ರಿಲ್ನಲ್ಲಿ 5ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿದ್ದರು. ಈ ಪರೀಕ್ಷೆಯಲ್ಲಿ ಭಾಗವಹಿಸಿದ 220 ವಿದ್ಯಾರ್ಥಿಗಳಲ್ಲಿ ಆಯ್ಕೆಯಾದ 24 ಮಕ್ಕಳನ್ನು ವಿಮಾನ ಪ್ರವಾಸಕ್ಕೆ ಆಯ್ಕೆ ಮಾಡಲಾಯಿತು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೀಳ್ಕೋಡುಗೆ ನೀಡಲಾಗಿದ್ದು, ಸಂಸದ ರಾಜಶೇಖರ ಹಿಟ್ನಾಳ ಅವರು ಮಕ್ಕಳಿಗೆ ಶುಭ ಹಾರೈಸಿದರು.
ಈ ಪ್ರಯಾಣಕ್ಕಾಗಿ ಬೀರಪ್ಪ ಅಂಡಗಿ ಅವರು ಸುಮಾರು 3.5 ಲಕ್ಷ ರೂ. ವೆಚ್ಚದಲ್ಲಿ ಚಾರ್ಟರ್ಡ್ ವಿಮಾನ ಬುಕ್ ಮಾಡಿದ್ದು, ಒಟ್ಟು ವೆಚ್ಚ 5 ಲಕ್ಷ ರೂ.ವರೆಗೆ ಆಗಲಿದೆ ಎಂದು ತಿಳಿಸಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು ಹಾಗೂ ಬಿಸಿಯೂಟ ಸಿಬ್ಬಂದಿಯನ್ನೂ ವಿಮಾನದಲ್ಲಿ ಕರೆದೊಯ್ಯಲಾಗಿದೆ.
ಶಿಕ್ಷಕ ಬೀರಪ್ಪ ಅಂಡಗಿ ಅವರ ಈ ಅನನ್ಯ ಹಾಗೂ ಸ್ಪೂರ್ತಿದಾಯಕ ಕಾರ್ಯಕ್ಕೆ ಎಲ್ಲೆಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.






