ಕ್ರಿಸ್‌ಮಸ್ ಬಂತೆಂದರೆ ಸಾಂತಾಕ್ಲಾಸ್‌ನಿಂದ ಯಾವ ಉಡುಗೊರೆ ಸಿಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಇರುತ್ತದೆ. ಆದರೆ ಈ ಬಾರಿ ಅಮೆರಿಕದ ಲೂಸಿಯಾನಾದ ಉದ್ಯಮಿಯೊಬ್ಬರು ನಿಜ ಜೀವನದ ಸಾಂತಾಕ್ಲಾಸ್‌ನಂತೆ ವರ್ತಿಸಿ ಎಲ್ಲರ ಮನ ಗೆದ್ದಿದ್ದಾರೆ. ಅವರ ಈ ಮಾನವೀಯ ನಡೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಅವರಿಗೆ ‘ರಿಯಲ್ ಲೈಫ್ ಸಾಂತಾ’ ಎಂಬ ಬಿರುದು ಸಿಕ್ಕಿದೆ.
ಫೈಬರ್‌ಬಾಂಡ್ ಕಂಪನಿಯ ಸಿಇಒ ಆಗಿದ್ದ ಗ್ರಹಾಂ ವಾಕರ್ (46) ತಮ್ಮ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 540 ಮಂದಿ ಉದ್ಯೋಗಿಗಳಿಗೆ ಒಟ್ಟು ಸುಮಾರು ₹2,155 ಕೋಟಿ ($240 ಮಿಲಿಯನ್) ಬೋನಸ್ ವಿತರಿಸಿದ್ದಾರೆ. ವಿದ್ಯುತ್ ಉಪಕರಣಗಳ ತಯಾರಿಕೆಯಲ್ಲಿ ತೊಡಗಿದ್ದ ಈ ಕಂಪನಿ ಭಾರೀ ಯಶಸ್ಸು ಕಂಡ ಬಳಿಕ, ಈಡನ್ ಕಾರ್ಪೊರೇಷನ್ ಕಂಪನಿಯು ಅದನ್ನು ಖರೀದಿಸಲು ಮುಂದಾಯಿತು. ಅಂತಿಮವಾಗಿ ಫೈಬರ್‌ಬಾಂಡ್ ಕಂಪನಿಯನ್ನು ಸುಮಾರು ₹15,265 ಕೋಟಿ ($1.7 ಬಿಲಿಯನ್)ಗೆ ಮಾರಾಟ ಮಾಡಲಾಯಿತು. ಇದರಿಂದ ಬಂದ ಲಾಭದ ಒಂದು ದೊಡ್ಡ ಭಾಗವನ್ನು ವಾಕರ್ ತಮ್ಮ ಉದ್ಯೋಗಿಗಳೊಂದಿಗೆ ಹಂಚಿಕೊಂಡರು.
ಕಂಪನಿಯ ಒಟ್ಟು ಮಾರಾಟ ಮೊತ್ತದ ಸುಮಾರು 15 ಶೇಕಡಾ ಹಣವನ್ನು ಬೋನಸ್ ರೂಪದಲ್ಲಿ ಉದ್ಯೋಗಿಗಳಿಗೆ ನೀಡಲಾಗಿದೆ. ಇದರ ಮೂಲಕ ಪ್ರತಿ ಉದ್ಯೋಗಿಗೆ ಸರಾಸರಿ ಸುಮಾರು ₹3.7 ಕೋಟಿ ($4.43 ಲಕ್ಷ) ಮೊತ್ತ ಸಿಕ್ಕಿದೆ. ಕಳೆದ ಜೂನ್ ತಿಂಗಳಲ್ಲಿ ಬೋನಸ್ ವಿತರಣೆ ಪ್ರಾರಂಭವಾಗಿದ್ದು, ಮೊದಲಿಗೆ ಇದನ್ನು ಕೇಳಿದಾಗ ಅನೇಕ ಉದ್ಯೋಗಿಗಳು ನಂಬಲು ಸಾಧ್ಯವಾಗಲಿಲ್ಲ. ಕೆಲವರು ಇದನ್ನು ತಮಾಷೆ ಎಂದು ಭಾವಿಸಿದರೆ, ಹಣ ಖಾತೆಗೆ ಜಮೆಯಾಗುತ್ತಿದ್ದಂತೆ ಅಚ್ಚರಿಗೊಂಡರು.
ಈ ನಿರ್ಧಾರವನ್ನು ಉದ್ಯೋಗಿಗಳ ನಿಷ್ಠೆ ಮತ್ತು ಪ್ರಾಮಾಣಿಕತೆಯ ಗೌರವಕ್ಕಾಗಿ ತೆಗೆದುಕೊಳ್ಳಲಾಗಿದೆ ಎಂದು ಗ್ರಹಾಂ ವಾಕರ್ ತಿಳಿಸಿದ್ದಾರೆ. ಕಷ್ಟದ ಸಮಯದಲ್ಲೂ ಕಂಪನಿಯೊಂದಿಗೇ ನಿಂತ ನೌಕರರ ಸೇವೆಗೆ ಪ್ರತಿಫಲ ನೀಡಬೇಕೆಂಬುದೇ ಅವರ ಉದ್ದೇಶವಾಗಿತ್ತು. ಬೋನಸ್ ಘೋಷಣೆಯ ವೇಳೆ ಕೆಲವರು ಭಾವುಕರಾಗಿ ಕಣ್ಣೀರಿಟ್ಟ ಘಟನೆಗಳೂ ನಡೆದಿವೆ.
ಈ ಬೋನಸ್ ಅನೇಕ ಉದ್ಯೋಗಿಗಳ ಜೀವನದಲ್ಲೇ ದೊಡ್ಡ ಬದಲಾವಣೆ ತಂದಿದೆ. ಕೆಲವರು ತಮ್ಮ ಗೃಹಸಾಲಗಳನ್ನು ತೀರಿಸಿದ್ದಾರೆ, ಇನ್ನೂ ಕೆಲವರು ಸಾಲಮುಕ್ತರಾಗಿದ್ದಾರೆ. ಕೆಲವರು ಮಕ್ಕಳ ಕಾಲೇಜು ಶಿಕ್ಷಣಕ್ಕೆ ಹಣ ಬಳಸಿದ್ದಾರೆ. 1995ರಿಂದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಉದ್ಯೋಗಿಯೊಬ್ಬರು ಈ ಹಣದ ನೆರವಿನಿಂದ ತಮ್ಮದೇ ವ್ಯಾಪಾರ ಆರಂಭಿಸುವ ಕನಸನ್ನು ನನಸಾಗಿಸಿದ್ದಾರೆ.
ಸಾಮಾನ್ಯವಾಗಿ ಕಂಪನಿ ಮಾರಾಟವಾದಾಗ ಲಾಭದ ಹೆಚ್ಚಿನ ಭಾಗ ಷೇರುದಾರರಿಗೆ ಮಾತ್ರ ಸೀಮಿತವಾಗುತ್ತದೆ. ಆದರೆ ಇಲ್ಲಿ ಉದ್ಯೋಗಿಗಳು ಕಂಪನಿಯಲ್ಲಿ ಯಾವುದೇ ಷೇರುಗಳನ್ನು ಹೊಂದಿರದಿದ್ದರೂ ಸಹ ಲಾಭದ ಪಾಲು ಪಡೆದಿದ್ದಾರೆ. ಇದುವೇ ಈ ನಡೆಯನ್ನು ನಿಜವಾದ ನಾಯಕತ್ವ ಮತ್ತು ಮಾನವೀಯ ಮೌಲ್ಯಗಳ ಪ್ರತೀಕವಾಗಿಸಿದೆ.
1982ರಲ್ಲಿ ಗ್ರಹಾಂ ವಾಕರ್ ಅವರ ತಂದೆ ಕ್ಲೌಡ್ ವಾಕರ್ ಹಾಗೂ ಇನ್ನಿತರ 11 ಮಂದಿ ಫೈಬರ್‌ಬಾಂಡ್ ಕಂಪನಿಯನ್ನು ಆರಂಭಿಸಿದ್ದರು. 1998ರಲ್ಲಿ ಸಂಭವಿಸಿದ ದೊಡ್ಡ ಕಾರ್ಖಾನೆ ಅಪಘಾತ, ಡಾಟ್‌ಕಾಮ್ ಬಿಕ್ಕಟ್ಟು ಸೇರಿದಂತೆ ಹಲವು ಸಂಕಷ್ಟಗಳನ್ನು ಕಂಪನಿ ಎದುರಿಸಿದೆ. ಇಂತಹ ಕಠಿಣ ಸಂದರ್ಭಗಳಲ್ಲೂ ಕಂಪನಿಯನ್ನು ಕೈಬಿಡದೇ ಜೊತೆಗಿದ್ದ ಉದ್ಯೋಗಿಗಳಿಗೆ ಪ್ರತಿಫಲವಾಗಿ ವಾಕರ್ ಈ ಬೋನಸ್ ನೀಡಿರುವುದು ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.
ಕ್ರಿಸ್‌ಮಸ್‌ಗೂ ಮೊದಲು ಉದ್ಯೋಗಿಗಳಿಗೆ ₹2,100 ಕೋಟಿ ಬೋನಸ್ ನೀಡಿ ‘ರಿಯಲ್ ಲೈಫ್ ಸಾಂತಾ’ ಆದ ಅಮೆರಿಕದ ಉದ್ಯಮಿ
By krutika naik
On: December 27, 2025 12:34 PM
---Advertisement---






