---Advertisement---

ಸುದೀಪ್ ಬಗ್ಗೆ ಧನ್ವೀರ್ ಟಾಂಗ್ಕೊಟ್ಟರು ಪ್ರೀತಿಯಿಂದಲೇ ಮಾತನಾಡಿದ ಕಿಚ್ಚ ಸುದೀಪ್

On: December 27, 2025 5:11 AM
Follow Us:
---Advertisement---

ಸುದೀಪ್ (Sudeep) ಒಬ್ಬ ಶ್ರೇಷ್ಠ ನಟ ಮಾತ್ರವಲ್ಲ, ಜವಾಬ್ದಾರಿಯುತ ಮತ್ತು ಸಂವೇದನಾಶೀಲ ವ್ಯಕ್ತಿಯೂ ಹೌದು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಇತ್ತೀಚೆಗೆ ಪೈರಸಿ ವಿರುದ್ಧ ಸುದೀಪ್ ಮಾಡಿದ ಹೇಳಿಕೆ ವಿವಾದಕ್ಕೆ ಕಾರಣವಾದರೂ, ಕೆಲವರು ಅದನ್ನು ಹೆಚ್ಚಿಸಿ ದೊಡ್ಡ ವಿಷಯವಾಗಿಸಲು ಯತ್ನಿಸಿದರು. ಆದರೆ ಸುದೀಪ್ ತಮ್ಮ ಜಾಣ್ಮೆ ಮತ್ತು ಪ್ರೌಢತನದಿಂದಲೇ ಆ ವಿವಾದವನ್ನು ಸಮರ್ಥವಾಗಿ ಹ್ಯಾಂಡಲ್ ಮಾಡಿದರು.

ಆ ಹೇಳಿಕೆಯ ನಂತರ ನೀಡಿದ ಪ್ರತಿಯೊಂದು ಸಂದರ್ಶನದಲ್ಲೂ ಅವರು ಜವಾಬ್ದಾರಿಯುತವಾಗಿ ಮಾತನಾಡಿ, ವಿವಾದ ಮತ್ತಷ್ಟು ಉಲ್ಬಣಗೊಳ್ಳದಂತೆ ನೋಡಿಕೊಂಡರು. ತಮ್ಮ ವಿರುದ್ಧವಾಗಿ ಮಾತನಾಡಿದ ಯುವ ನಟರ ಕುರಿತು ಸಹ ಸುದೀಪ್ ಕೋಪ ಅಥವಾ ದ್ವೇಷ ತೋರಿಸದೇ, ಪ್ರೀತಿ ಮತ್ತು ಕರುಣೆಯಿಂದಲೇ ಪ್ರತಿಕ್ರಿಯೆ ನೀಡಿದರು. ಇದರಿಂದ ಅವರ ದೊಡ್ಡತನ ಮತ್ತೊಮ್ಮೆ ಬೆಳಕಿಗೆ ಬಂದಿದೆ.

ಹುಬ್ಬಳ್ಳಿಯಲ್ಲಿ ಪೈರಸಿ ವಿರುದ್ಧ ಸುದೀಪ್ ಮಾಡಿದ ಭಾಷಣವನ್ನು ದರ್ಶನ್ ಅಭಿಮಾನಿಗಳು ವೈಯಕ್ತಿಕವಾಗಿ ತೆಗೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸುದೀಪ್ ವಿರುದ್ಧ ಹಲವು ಪೋಸ್ಟ್‌ಗಳನ್ನು ಹಂಚಿಕೊಂಡಿದ್ದರು. ಈ ಮಧ್ಯೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಹೇಳಿಕೆ ವಿವಾದಕ್ಕೆ ಮತ್ತಷ್ಟು ಇಂಧನ ನೀಡಿತ್ತು. ಅದೇ ವೇಳೆ ದರ್ಶನ್ ಆಪ್ತ ಧನ್ವೀರ್, “ಕಾಡಲ್ಲಿ ಎಲ್ಲ ಪ್ರಾಣಿಗಳಿರುತ್ತವೆ, ಆದರೆ ಸಿಂಹವೇ ರಾಜ” ಎಂದು ಟ್ವೀಟ್ ಮಾಡಿ ದರ್ಶನ್ ಪರವಾಗಿ ನಿಂತು, ಸುದೀಪ್ ಅವರನ್ನು ತಗ್ಗಿಸಿ ತೋರಿಸುವ ಪ್ರಯತ್ನ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಸುದೀಪ್ ಆಪ್ತ ವಿನಯ್ ಸಮರ್ಪಕವಾಗಿ ಕೌಂಟರ್ ನೀಡಿದ್ದರು.

ಈ ಎಲ್ಲ ಬೆಳವಣಿಗೆಗಳ ಕುರಿತು ಸಂದರ್ಶನವೊಂದರಲ್ಲಿ ಪ್ರಶ್ನೆ ಕೇಳಿದಾಗ, ಸುದೀಪ್ ಅತ್ಯಂತ ಪ್ರೌಢ ಉತ್ತರ ನೀಡಿದ್ದಾರೆ. “ಧನ್ವೀರ್, ವಿನಯ್ ಎಲ್ಲರೂ ನನಗೆ ಒಂದೇ. ಅವರು ನಮ್ಮ ಚಿತ್ರರಂಗದ ಯುವ ನಟರು. ಧನ್ವೀರ್ ಅವರನ್ನು ನಾನು ಗಮನಿಸಿದ್ದೇನೆ, ಅವರು ಹೇಗೆ ಮುನ್ನಡೆಯುತ್ತಿದ್ದಾರೆ ಎಂಬುದು ನನಗೆ ಗೊತ್ತು. ಅದನ್ನು ನಾನು ಮೆಚ್ಚುತ್ತೇನೆ” ಎಂದು ಹೇಳಿದರು.

ಇನ್ನೂ ಮುಂದುವರೆದು, “ಒಬ್ಬ ಹೀರೋ ಜೊತೆಗೆ ನಿಲ್ಲಬೇಕಾದರೆ, ಅವರ ಮೇಲಿನ ನಿಷ್ಠೆ, ಪ್ರೀತಿ ಮತ್ತು ಲಾಯಲ್ಟಿ ಅಗತ್ಯ. ಏನೇ ಆಗಲಿ, ನಾನು ನನ್ನ ಹೀರೋ ಜೊತೆಗೆ ನಿಲ್ಲುತ್ತೇನೆ ಎಂಬ ಅವರ ಹಠ ನನಗೆ ಇಷ್ಟವಾಯಿತು” ಎಂದು ಸುದೀಪ್ ಹೇಳಿದರು.

ಈ ಮೂಲಕ ತಮ್ಮ ಬಗ್ಗೆ ಪರೋಕ್ಷವಾಗಿ ಟಾಂಗ್ ನೀಡಿದ್ದ ಯುವ ನಟನನ್ನೂ ಸಹ ಪ್ರಶಂಸಿಸಿ ಮಾತನಾಡಿ, ಕಿಚ್ಚ ಸುದೀಪ್ ತಮ್ಮ ದೊಡ್ಡತನವನ್ನು ತೋರಿಸಿದ್ದಾರೆ. ಸುದೀಪ್ ಮಾತುಗಳನ್ನು ದರ್ಶನ್ ಹಾಗೂ ಧನ್ವೀರ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ತೂಕದ ಮಾತುಗಳಿಂದ ವಿರೋಧಿಗಳ ಮನಸ್ಸನ್ನೂ ಗೆದ್ದಿದ್ದಾರೆ ಕಿಚ್ಚ ಸುದೀಪ್.

Join WhatsApp

Join Now

RELATED POSTS