ಬೆಂಗಳೂರು (ಡಿ.26): ಮದುವೆಯಾಗಿ ಒಂದೂವರೆ ತಿಂಗಳಲ್ಲೇ ನವವಧು ಗಾನವಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಗಾನವಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆಸ್ಪತ್ರೆ ಎದುರು ಕುಟುಂಬಸ್ಥರು ಮತ್ತು ಸಂಬಂಧಿಕರು ಆರೋಪಿಗಳನ್ನು ಬಂಧಿಸುವಂತೆ ಪ್ರತಿಭಟನೆ ನಡೆಸಿದ್ದಾರೆ.
ಗಾನವಿಯ ಪತಿ ಸೂರಜ್, ಆತನ ಅಣ್ಣ ಸಂಜಯ್ ಹಾಗೂ ತಾಯಿ ಜಯಂತಿ ಅವರನ್ನು ತಕ್ಷಣವೇ ಬಂಧಿಸಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಈ ನಡುವೆ ಗಾನವಿಯ ಪತಿ ನಪುಂಸಕನಾಗಿದ್ದು, ಹಣದಾಹಿ ಕುಟುಂಬವಾಗಿತ್ತು ಎಂದು ಗಾನವಿಯ ಕುಟುಂಬ ಗಂಭೀರ ಆರೋಪ ಮಾಡಿದೆ.
ಗಾನವಿಯ ದೊಡ್ಡಮ್ಮ ಮಾತನಾಡಿ, “ಒಳ್ಳೆಯ ಸಂಬಂಧ ಎಂದು ನಾನೇ ಮದುವೆಗೆ ಮುಂದಾದೆ. ಅವರ ಬೇಡಿಕೆಯಂತೆ ಅದ್ದೂರಿ ರಿಸೆಪ್ಷನ್ ಕೂಡ ಮಾಡಿಕೊಟ್ಟೆವು. ಆದರೆ ಮದುವೆಯಾದ ಬಳಿಕ ವರದಕ್ಷಿಣೆ ಹಾಗೂ ಒಡವೆಗಾಗಿ ನಿರಂತರವಾಗಿ ಹಿಂಸೆ ನೀಡಿದರು. ಮದುವೆಯಾಗಿ ತಿಂಗಳಾದರೂ ನಮ್ಮ ಹುಡುಗಿಯನ್ನು ಆತ ಟಚ್ ಕೂಡ ಮಾಡಿಲ್ಲ. ಹನಿಮೂನ್ ಅನ್ನು ಪದೇಪದೇ ಮುಂದೂಡುತ್ತಿದ್ದರು. ಹನಿಮೂನ್‌ಗೆ ಹೋದರೂ ಇಬ್ಬರ ನಡುವೆ ಏನೂ ನಡೆದಿಲ್ಲ” ಎಂದು ಆರೋಪಿಸಿದ್ದಾರೆ.
“ಆತನ ಸಮಸ್ಯೆಯನ್ನು ಮುಚ್ಚಿಡಲು ಗಾನವಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದರು. ಒಡವೆ ಮತ್ತು ಹಣಕ್ಕಾಗಿ ಕಿರುಕುಳ ನೀಡುತ್ತಿದ್ದರು. ಕಳೆದ ಭಾನುವಾರವೇ ಶ್ರೀಲಂಕಾಕ್ಕೆ ಹನಿಮೂನ್‌ಗೆ ಹೋಗಿ ವಾಪಸ್ ಬಂದಿದ್ದರು. ಅಮ್ಮನನ್ನು ನೋಡಲು ಮನೆಗೆ ಕರೆತಂದೆ ಎಂದು ಹೇಳಿದ್ದ. ಅಮ್ಮನ ಜೊತೆ ಇರಬೇಕಿದ್ದರೆ ಮದುವೆ ಏಕೆ ಮಾಡಿಕೊಳ್ಳಬೇಕಿತ್ತು ಎಂದು ಪ್ರಶ್ನಿಸಿದಾಗ, ನಿಮ್ಮ ಮಗಳನ್ನು ನಿಮ್ಮ ಮನೆಗೆ ಕರೆದುಕೊಂಡು ಹೋಗಿ ಎಂದು ಹೇಳುತ್ತಿದ್ದ” ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಮನೆಗೆ ಕರೆದುಕೊಂಡು ಬರುವಾಗ ನಮ್ಮ ಮಗಳು ಕಾಲು ಹಿಡಿದು ಬೇಡಿಕೊಂಡಳು. ‘ನನ್ನ ಕಳಿಸಬೇಡ, ಸೂರಜ್ ಜೊತೆನೇ ಇರುತ್ತೀನಿ. ನಮ್ಮ ಮನೆಯ ಮರ್ಯಾದೆ ಹೋಗುತ್ತೆ’ ಎಂದು ಅಳುತ್ತಾ ಬೇಡಿಕೊಂಡಳು. ಎಷ್ಟೇ ಹಿಂಸೆ ಆದರೂ ಇಲ್ಲೇ ಇರುತ್ತೇನೆ ಎಂದಳು” ಎಂದು ದೊಡ್ಡಮ್ಮ ಕಣ್ಣೀರಿಟ್ಟಿದ್ದಾರೆ.
ಅಲ್ಲದೆ, ರೂಮ್ ಬಾಗಿಲು ತೆರೆದೆಯೇ ಇಟ್ಟುಕೊಂಡು ಕೂತಿರಬೇಕಾಗುತ್ತಿತ್ತು. ಅವರ ಮನೆಗೆ ಹೋದ ದಿನದಿಂದ ಮಗಳು ನಿರಂತರವಾಗಿ ಅಳುತ್ತಲೇ ಇದ್ದಳು. ನಮಗೆ ನ್ಯಾಯ ಬೇಕು, ಮಗಳ ಸಾವಿಗೆ ನ್ಯಾಯ ಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಮನೆಗೆ ಕರೆತಂದ ನಂತರ ಅಮ್ಮನನ್ನು ಹೊರಗೆ ಕಳಿಸಿ ಗಾನವಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅವರು ಆರೋಪಿಸಿದ್ದಾರೆ.
ಇನ್ನು ಗಾನವಿಯ ಚಿಕ್ಕಪ್ಪ ಕಾರ್ತಿಕ್ ಮಾತನಾಡಿ, “ಗಾನವಿಯ ಪತಿ ಸೂರಜ್, ಅತ್ತೆ ಹಾಗೂ ಸಂಜಯ್ ವಿರುದ್ಧ ದೂರು ದಾಖಲಿಸಿದ್ದೇವೆ. ವರದಕ್ಷಿಣೆ ಕಿರುಕುಳ ಆರೋಪದಡಿ ದೂರು ನೀಡಲಾಗಿದೆ. ಮದುವೆಯ ನಂತರ ಆಭರಣ ಹಾಗೂ ಇನ್ನೋವಾ ಕಾರು ಕೊಡಿಸುವಂತೆ ನಿರಂತರ ಕಿರುಕುಳ ನೀಡಿದ್ದರು. ಸಂಸಾರದ ಬಗ್ಗೆ ಆತನಿಗೆ ಆಸಕ್ತಿಯೇ ಇರಲಿಲ್ಲ. ಆ ವಿಚಾರವನ್ನು ಮುಚ್ಚಿಟ್ಟುಕೊಂಡೇ ಮದುವೆ ಮಾಡಿದ್ದರು. ಪೊಲೀಸರು ದೂರು ಸ್ವೀಕರಿಸಿ ತನಿಖೆ ನಡೆಸುತ್ತಿದ್ದಾರೆ. ಮೂವರ ಫೋನ್‌ಗಳು ಸ್ವಿಚ್ ಆಫ್ ಆಗಿವೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ತಿಳಿಸಿದ್ದಾರೆ.






