---Advertisement---

ಹಠಕ್ಕೆ ಬಿದ್ದು ಮದುವೆಯಾಗಿದ್ದ ಯುವತಿ: ಆರೇ ತಿಂಗಳಲ್ಲಿ ಪತಿಯನ್ನು ಕಳೆದುಕೊಂಡ ದುರಂತ

On: December 26, 2025 8:50 AM
Follow Us:
---Advertisement---

ಚಿಕ್ಕಬಳ್ಳಾಪುರ, ಡಿಸೆಂಬರ್ 26: ಬೈಕ್‌ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಒಂದೇ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಯುವಕರು ದಾರುಣವಾಗಿ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಶೋಕದಲ್ಲಿ ಮುಳುಗಿಸಿದೆ. ಈ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ನೋವು ಹೇಳತೀರದಂತಾಗಿದೆ.

ಮೃತರ ಪೈಕಿ ನರಸಿಂಹ ಎಂಬ ಯುವಕನಿಗೆ ಆರು ತಿಂಗಳ ಹಿಂದೆಯಷ್ಟೇ ಮದುವೆಯಾಗಿತ್ತು. ಪ್ರೀತಿಸಿ ಹಠಕ್ಕೆ ಬಿದ್ದು ನರಸಿಂಹರನ್ನು ವಿವಾಹವಾಗಿದ್ದ ಯುವತಿ, ಮದುವೆಯಾದ ಕೆಲವೇ ತಿಂಗಳಲ್ಲಿ ವಿಧಿಯಾಟಕ್ಕೆ ಗಂಡನನ್ನು ಕಳೆದುಕೊಂಡಿದ್ದಾರೆ. ಈ ದುರಂತ ಕುಟುಂಬವನ್ನು ಸಂಪೂರ್ಣವಾಗಿ ಕುಸಿದಿದೆ.

ಅಪಘಾತದಲ್ಲಿ ನರಸಿಂಹ ಮತ್ತು ಅವರ ಸಹೋದರ ನಂದೀಶ್ ಇಬ್ಬರೂ ಪ್ರಾಣ ಕಳೆದುಕೊಂಡಿದ್ದು, ಕುಟುಂಬದ ಮೇಲೆ ಮತ್ತೊಂದು ದೊಡ್ಡ ಆಘಾತ ಬಿದ್ದಿದೆ. ಈಗಾಗಲೇ ಐದು ವರ್ಷಗಳ ಹಿಂದೆ ಕ್ರಿಸ್‌ಮಸ್ ದಿನವೇ ಮೃತರ ತಂದೆಯೂ ನಿಧನರಾಗಿದ್ದರು. ಕುಟುಂಬಕ್ಕೆ ಆಧಾರವಾಗಿದ್ದ ಇಬ್ಬರು ಗಂಡು ಮಕ್ಕಳು ಒಂದೇ ಅಪಘಾತದಲ್ಲಿ ಸಾವನ್ನಪ್ಪಿರುವುದರಿಂದ ತಾಯಿಯ ಆಕ್ರಂದನ ನೆರೆದವರ ಕಣ್ಣಲ್ಲೂ ನೀರು ತರಿಸಿದೆ.

ಈ ದುರ್ಘಟನೆಗೆ ಸಂಬಂಧಿಸಿದಂತೆ ಶಾಸಕ ಪ್ರದೀಪ್ ಈಶ್ವರ್ ಅವರು ಮೃತರ ಕುಟುಂಬದ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಅಂತ್ಯಕ್ರಿಯೆಗೆ ಆರ್ಥಿಕ ಸಹಾಯ ಒದಗಿಸಿದ್ದು, ಮುಂದಿನ ದಿನಗಳಲ್ಲಿ ಕುಟುಂಬಸ್ಥರಿಗೆ ಉದ್ಯೋಗ ವ್ಯವಸ್ಥೆ ಮಾಡಿಕೊಡುವ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. “ಮೃತ ಯುವಕರ ಕುಟುಂಬಗಳು ಕಡು ಬಡವರಾಗಿದ್ದು, ಇವರ ಮೇಲೆಯೇ ಸಂಪೂರ್ಣವಾಗಿ ಅವಲಂಬಿತವಾಗಿದ್ದವು” ಎಂದು ಅವರು ಹೇಳಿದರು.

ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗೇಟ್ ಬಳಿ ನಡೆದಿದೆ. ಚಿಕ್ಕಬಳ್ಳಾಪುರದಿಂದ ಬೈಕ್‌ನಲ್ಲಿ ಬರುತ್ತಿದ್ದ ಮನೋಜ್, ನರಸಿಂಹ, ನಂದೀಶ್ ಹಾಗೂ ಅರುಣ್ ಎಂಬ ನಾಲ್ವರು ಯುವಕರು ಅಜ್ಜವಾರ ಕ್ರಾಸ್ ಬಳಿ ತಿರುವು ಪಡೆಯುವ ವೇಳೆ ವೇಗವಾಗಿ ಬಂದ ಟಿಪ್ಪರ್ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ನಾಲ್ವರೂ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Join WhatsApp

Join Now

RELATED POSTS