ಮೈಸೂರು: ಮೈಸೂರು ಅರಮನೆ ಮುಂಭಾಗದ ಜಯಚಾಮರಾಜೇಂದ್ರ ಗೇಟ್ ಬಳಿ ಗುರುವಾರ ಸಂಜೆ ಭೀಕರ ಸ್ಪೋಟ ಸಂಭವಿಸಿದ್ದು, ಒಬ್ಬರು ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅರಮನೆ ಎದುರು ಹೀಲಿಯಂ ಬಲೂನ್ ಮಾರಾಟ ಮಾಡುತ್ತಿದ್ದ ವ್ಯಾಪಾರಿಯ ಸಿಲಿಂಡರ್ ಏಕಾಏಕಿ ಸ್ಪೋಟಗೊಂಡ ಪರಿಣಾಮ ಈ ದುರ್ಘಟನೆ ನಡೆದಿದೆ. ಸ್ಪೋಟದ ತೀವ್ರತೆಗೆ ಬಲೂನ್ ವ್ಯಾಪಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡ ನಾಲ್ವರನ್ನು ತಕ್ಷಣ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ.
ಕ್ರಿಸ್ಮಸ್ ರಜೆ ಹಿನ್ನೆಲೆ ಮೈಸೂರು ಅರಮನೆ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು. ಅರಮನೆ ವೀಕ್ಷಣೆ ಮುಗಿಸಿ ಹೊರಬರುತ್ತಿದ್ದ ವೇಳೆ, ಪಾದಚಾರಿ ಮಾರಾಟಗಾರರ ಬಳಿ ಜನಸಂದಣಿ ನೆರೆದಿತ್ತು. ಇದೇ ವೇಳೆ ಸೈಕಲ್ನಲ್ಲಿ ಹೀಲಿಯಂ ಬಲೂನ್ ಸಿಲಿಂಡರ್ ಇಟ್ಟುಕೊಂಡಿದ್ದ ವ್ಯಾಪಾರಿಯ ಬಳಿ ಸಿಲಿಂಡರ್ ಸ್ಪೋಟಗೊಂಡಿದ್ದು, ಸುತ್ತಮುತ್ತ ನಿಂತಿದ್ದವರಿಗೆ ಗಾಯಗಳಾಗಿವೆ. ಘಟನೆ ರಾತ್ರಿ ಸುಮಾರು 8.30ರ ವೇಳೆಗೆ ನಡೆದಿದೆ.
ಮೃತ ವ್ಯಾಪಾರಿ ಸುಮಾರು 40–42 ವರ್ಷ ವಯಸ್ಸಿನ ಪುರುಷನಾಗಿದ್ದು, ಅವರ ಗುರುತು ಇನ್ನೂ ಪತ್ತೆಯಾಗಿಲ್ಲ. ಗಾಯಗೊಂಡವರಲ್ಲಿ ಬೆಂಗಳೂರು ಮೂಲದ ಲಕ್ಷ್ಮೀ ಅವರ ಸ್ಥಿತಿ ಗಂಭೀರವಾಗಿದೆ. ನಂಜನಗೂಡಿನ ಮಂಜುಳಾ ಅವರಿಗೆ ತಲೆಗೆ ಗಾಯವಾಗಿದ್ದು, ರಾಣಿಬೆನ್ನೂರಿನ ಕೊಟ್ರೇಶ್ ಗುತ್ತೆ ಹಾಗೂ ಕೊಲ್ಕತ್ತಾ ಮೂಲದ ಶಹೀನಾ ಶಬ್ಬಿರ್ ಅವರಿಗೆ ಕಾಲಿಗೆ ಗಾಯಗಳಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆ ನಡೆದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.






