ಬೆಂಗಳೂರು (ಡಿ.25): ಜೀವನದಲ್ಲಿ ದೊಡ್ಡ ಕನಸುಗಳನ್ನು ಕಟ್ಟಿಕೊಂಡು ಬೆಂಗಳೂರಿಗೆ ಬಂದಿದ್ದ ಯುವತಿಯೊಬ್ಬಳು, ತನ್ನ ಸಾವು ರಸ್ತೆ ಮಧ್ಯೆ ಇಂತಹ ಭೀಕರ ರೀತಿಯಲ್ಲಿ ಸಂಭವಿಸಲಿದೆ ಎಂದು ಕನಸಲ್ಲೂ ಊಹಿಸಿರಲಿಲ್ಲ. ಭಟ್ಕಳ ಮೂಲದ ರಶ್ಮಿ ಮಹಾಲೆ ಅವರು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಸಮೀಪ ಜವನಗೊಂಡನಹಳ್ಳಿ–ಗೊರ್ಲತ್ತು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ–48ರಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ದುರ್ಮರಣ ಹೊಂದಿದ್ದಾರೆ.
ಗೋಕರ್ಣಕ್ಕೆ ಸ್ನೇಹಿತರಾದ ಗಗನಾ ಮತ್ತು ರಕ್ಷಿತಾ ಅವರೊಂದಿಗೆ ಪ್ರಯಾಣಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದ್ದು, ರಶ್ಮಿ ಅವರ ದೇಹ ಗುರುತೇ ಸಿಗದಷ್ಟು ಸುಟ್ಟು ಕರಕಲಾಗಿದೆ ಎಂದು ತಿಳಿದುಬಂದಿದೆ.
ಭಟ್ಕಳದಲ್ಲಿಯೇ ಬೆಳೆದು ವಿದ್ಯಾಭ್ಯಾಸ ಮಾಡಿದ ರಶ್ಮಿ ಮಹಾಲೆ, 10ನೇ ತರಗತಿವರೆಗೆ ಆನಂದ ಆಶ್ರಮ ಕಾನ್ವೆಂಟ್‌ನಲ್ಲಿ ಓದಿದ್ದರು. ನಂತರ ಸಿದ್ಧಾರ್ಥ ಪ್ರೀ-ಯುನಿವರ್ಸಿಟಿ ಕಾಲೇಜಿನಲ್ಲಿ ಪಿಯುಸಿ ಪೂರ್ಣಗೊಳಿಸಿ, ಶ್ರೀ ಗುರು ಸುಧೀಂದ್ರ ಡಿಗ್ರಿ ಕಾಲೇಜಿನಲ್ಲಿ ಕಾಮರ್ಸ್ ವಿಭಾಗದಲ್ಲಿ ಬಿಕಾಂ ಪದವಿ ಪಡೆದಿದ್ದರು. 2020ರಿಂದ 2023ರವರೆಗೆ ಪದವಿ ವಿದ್ಯಾಭ್ಯಾಸ ನಡೆಸಿದ ರಶ್ಮಿ, ಅಂತಿಮ ವರ್ಷದ ಅವಧಿಯಲ್ಲೇ ಟಿಸಿಎಸ್ ಕಂಪನಿಯ ಪರೀಕ್ಷೆ ಬರೆದು ಉದ್ಯೋಗ ಪಡೆದುಕೊಂಡಿದ್ದರು.
ಟಿಸಿಎಸ್‌ನಲ್ಲಿ ಸುಮಾರು ಒಂದು ವರ್ಷ ಎಂಟು ತಿಂಗಳು ಬಿಸಿನೆಸ್ ಪ್ರೊಸೆಸ್ ಅಸೋಸಿಯೇಟ್ ಆಗಿ ಕೆಲಸ ಮಾಡಿದ ಅವರು, ಏಳು ತಿಂಗಳ ಹಿಂದೆ ಡೆಲಾಯ್ಟ್ ಕಂಪನಿಗೆ ಎಎಂಎಲ್ ಅನಾಲಿಸ್ಟ್ ಆಗಿ ಸೇರ್ಪಡೆಯಾಗಿದ್ದರು. ಹೈಬ್ರಿಡ್ ಮಾದರಿಯಲ್ಲಿ ಅವರು ಕೆಲಸ ನಿರ್ವಹಿಸುತ್ತಿದ್ದರು.
ಪ್ರತಿಷ್ಠಿತ ಕಂಪನಿಯಲ್ಲಿ ಉತ್ತಮ ಉದ್ಯೋಗ, ನೆಮ್ಮದಿಯ ಬದುಕಿನ ಕನಸು ಕಂಡಿದ್ದ ರಶ್ಮಿ, ಹೊಸ ವರ್ಷದ ಸಂಭ್ರಮವನ್ನು ಸ್ನೇಹಿತರೊಂದಿಗೆ ಆಚರಿಸುವ ಯೋಜನೆಯಲ್ಲಿದ್ದಾಗಲೇ ದುರಂತ ಸಾವಿಗೆ ಬಲಿಯಾಗಿದ್ದಾರೆ.
ಟಿಸಿಎಸ್‌ನಲ್ಲಿ ಪ್ಲೇಸ್‌ಮೆಂಟ್ ದೊರಕಿದ ಕ್ಷಣದ ಬಗ್ಗೆ ಮಾತನಾಡಿದ್ದ ರಶ್ಮಿ, “ಪ್ಲೇಸ್‌ಮೆಂಟ್ ಅವಕಾಶವಿದೆ ಎಂದು ಪ್ರೊಫೆಸರ್ ಅಪ್ಲೈ ಮಾಡಲು ಹೇಳಿದ್ದರು. ಆನ್‌ಲೈನ್ ಪರೀಕ್ಷೆಗೆ ನಾನು ಯೂಟ್ಯೂಬ್ ವಿಡಿಯೋಗಳ ಮೂಲಕ ತಯಾರಿ ಮಾಡಿಕೊಂಡೆ. ಪರೀಕ್ಷೆಯಲ್ಲಿ ಲಾಜಿಕಲ್ ರೀಸನಿಂಗ್, ಮ್ಯಾಥಮ್ಯಾಟಿಕ್ಸ್ ಸೇರಿದಂತೆ ಮೂರು ವಿಭಾಗಗಳ ಪ್ರಶ್ನೆಗಳಿದ್ದವು” ಎಂದು ಹೇಳಿಕೊಂಡಿದ್ದರು.
ಹೊಸ ಬದುಕಿನ ಕನಸು, ಸ್ವಚ್ಛಂದವಾಗಿ ಬದುಕಬೇಕೆಂಬ ಆಸೆಯೊಂದಿಗೆ ಮುಂದುವರಿದಿದ್ದ ರಶ್ಮಿ ಮಹಾಲೆ ಅವರ ಜೀವನ ಒಂದೇ ಕ್ಷಣದಲ್ಲಿ ಅಂತ್ಯ ಕಂಡಿದೆ.






