ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜಯಂತಿಯ ಅಂಗವಾಗಿ, ಕರ್ನಾಟಕದ ಇಂದಿರಾ ಕ್ಯಾಂಟೀನ್ ಮಾದರಿಯಲ್ಲಿ ದೆಹಲಿ ಸರ್ಕಾರ ಇಂದು (ಡಿ.25) ರಾಜಧಾನಿಯಲ್ಲಿ 100 ಹೊಸ ‘ಅಟಲ್ ಕ್ಯಾಂಟೀನ್’ಗಳನ್ನು ಆರಂಭಿಸಿದೆ. ಈ ಕ್ಯಾಂಟೀನ್‌ಗಳಲ್ಲಿ ಕೇವಲ 5 ರೂಪಾಯಿಗೆ ಪೌಷ್ಟಿಕ ಆಹಾರ ಒದಗಿಸಲಾಗುತ್ತಿದೆ.
ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಲಾಜಪತ್ ನಗರದ ನೆಹರೂ ನಗರದಲ್ಲಿ ಮೊದಲ ಅಟಲ್ ಕ್ಯಾಂಟೀನ್‌ಗೆ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನಗರಾಭಿವೃದ್ಧಿ ಸಚಿವ ಆಶಿಷ್ ಸೂದ್, ಭಾರತೀಯ ಜನತಾ ಪಕ್ಷದ ಚುನಾವಣಾ ಭರವಸೆಯಂತೆ ಈ ಯೋಜನೆಯನ್ನು ಜಾರಿಗೊಳಿಸಲಾಗಿದ್ದು, ಪ್ರತಿಯೊಂದು ಕ್ಯಾಂಟೀನ್‌ನಲ್ಲಿ ದಿನಕ್ಕೆ ಸುಮಾರು 500 ಜನರಿಗೆ ಮಧ್ಯಾಹ್ನ ಮತ್ತು ರಾತ್ರಿ ಊಟ ನೀಡಲಾಗುತ್ತದೆ ಎಂದು ತಿಳಿಸಿದರು. ಇದರ ಮೂಲಕ ಒಟ್ಟಾರೆಯಾಗಿ ದಿನಕ್ಕೆ ಸುಮಾರು ಒಂದು ಲಕ್ಷ ಜನರಿಗೆ ಊಟ ಒದಗಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದರು.
ಅಟಲ್ ಕ್ಯಾಂಟೀನ್‌ಗಳಲ್ಲಿ ರೊಟ್ಟಿ, ದಾಲ್, ತರಕಾರಿ, ಅನ್ನ ಹಾಗೂ ಉಪ್ಪಿನಕಾಯಿ ಸೇರಿದಂತೆ ಪೌಷ್ಟಿಕಾಂಶಯುಕ್ತ ಆಹಾರ ಲಭ್ಯವಿರುತ್ತದೆ. ಒಂದು ಊಟದ ವಾಸ್ತವಿಕ ವೆಚ್ಚ ಸುಮಾರು 30 ರೂಪಾಯಿ ಇದ್ದರೂ, ಸರ್ಕಾರದ ಸಬ್ಸಿಡಿಯಿಂದ 5 ರೂಪಾಯಿಗೆ ಊಟ ನೀಡಲಾಗುತ್ತಿದೆ.
ಮುಖ್ಯವಾಗಿ ಜನಸಂದಣಿ ಇರುವ ಪ್ರದೇಶಗಳ ಸಮೀಪ ಈ ಕ್ಯಾಂಟೀನ್‌ಗಳನ್ನು ಸ್ಥಾಪಿಸಲಾಗಿದ್ದು, ದೆಹಲಿ ಅರ್ಬನ್ ಶೆಲ್ಟರ್ ಇಂಪ್ರೂವ್‌ಮೆಂಟ್ ಬೋರ್ಡ್ (DUSIB) ಇವುಗಳ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ.
ಯಾರೂ ಹಸಿವಿನಿಂದ ಮಲಗಬಾರದು ಎಂಬ ಉದ್ದೇಶದಿಂದ ಆರಂಭಿಸಲಾದ ಈ ಯೋಜನೆ ದೆಹಲಿಯ ಬಡ ಮತ್ತು ಕಾರ್ಮಿಕ ವರ್ಗಕ್ಕೆ ದೊಡ್ಡ ನೆರವಾಗಲಿದೆ. ಈ ಯೋಜನೆ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಬಡವರ ಮೇಲಿದ್ದ ಕಾಳಜಿಯನ್ನು ನೆನಪಿಸುತ್ತದೆ ಎಂದು ಮುಖ್ಯಮಂತ್ರಿ ರೇಖಾ ಗುಪ್ತಾ ಹೇಳಿದರು.






