ಚಿತ್ರದುರ್ಗದಲ್ಲಿ ಸಂಭವಿಸಿದ ಭೀಕರ ಬಸ್ ದುರಂತ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ಸೀ ಬರ್ಡ್ ಟ್ರಾವೆಲ್ಸ್‌ನ ಬಸ್ (KA-01 AE-5217) ಬೆಂಕಿಗೆ ಆಹುತಿಯಾಗಿದ್ದು, ಈ ದುರ್ಘಟನೆ ಜನರ ಮನಸ್ಸನ್ನು ಕಲುಷಿತಗೊಳಿಸಿದೆ. ಡಿಸೆಂಬರ್ 24, 2025ರ ರಾತ್ರಿ ಈ ಬಸ್ ತನ್ನ ಪ್ರಯಾಣ ಆರಂಭಿಸಿತ್ತು. ಲಭ್ಯವಿರುವ ಮಾಹಿತಿಯ ಪ್ರಕಾರ ಬಸ್‌ನಲ್ಲಿ ಒಟ್ಟು 29 ಮಂದಿ ಪ್ರಯಾಣಿಕರು ಇದ್ದರು. ಇದಲ್ಲದೆ, ಮೂವರು ಬಸ್ ಸಿಬ್ಬಂದಿಯೂ ಸಹ ಈ ಬಸ್‌ನಲ್ಲಿದ್ದರು.
ಸೀ ಬರ್ಡ್ ಟ್ರಾವೆಲ್ಸ್ ಬಿಡುಗಡೆ ಮಾಡಿರುವ ಚಾರ್ಟ್ ಪ್ರಕಾರ, ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ಹೆಸರುಗಳು ಇದೀಗ ಲಭ್ಯವಾಗಿವೆ. ವಿವಿಧ ಪಿಕಪ್ ಪಾಯಿಂಟ್‌ಗಳಿಂದ ಪ್ರಯಾಣಿಕರು ಬಸ್ ಹತ್ತಿದ್ದು, ಪ್ರತಿಯೊಬ್ಬರೂ ತಮ್ಮ ತಮ್ಮ ಗಮ್ಯಸ್ಥಾನಗಳತ್ತ ಹೊರಟಿದ್ದರು.
ಬೆಂಗಳೂರು ನಗರದ ಗಾಂಧಿನಗರದಲ್ಲಿರುವ ಸೀ ಬರ್ಡ್ ಲಾಂಜ್‌ನಿಂದ ರಾತ್ರಿ 8:25ಕ್ಕೆ ಬಸ್ ಹೊರಟಿದೆ. ಈ ಸ್ಥಳದಿಂದ ಒಟ್ಟು ಏಳು ಮಂದಿ ಬಸ್ ಹತ್ತಿದ್ದು, ಮಂಜುನಾಥ್, ಸಂಧ್ಯಾ ಎಚ್, ಶಶಾಂಕ್ ಎಚ್ ವಿ, ದಿಲೀಪ್, ಪ್ರತೀಶ್ವರನ್, ಬಿಂದು ವಿ ಹಾಗೂ ಕವಿತಾ ಕೆ ಅವರುಗಳು ಇಲ್ಲಿ ತಮ್ಮ ಪ್ರಯಾಣ ಆರಂಭಿಸಿದ್ದಾರೆ.
ಅನಂತರ ಬಸ್ ಆನಂದರಾವ್ ಸರ್ಕಲ್ ತಲುಪಿದಾಗ, ಅಲ್ಲಿಂದ ಮೂವರು ಪ್ರಯಾಣಿಕರು ಬಸ್ ಏರಿದ್ದಾರೆ. ಅನಿರುದ್ಧ್ ಬ್ಯಾನರ್ಜಿ, ಅಮೃತಾ ಹಾಗೂ ಇಶಾ ಅವರುಗಳು ಇಲ್ಲಿ ಬಸ್ ಹತ್ತಿದ್ದು, ಸ್ಲೀಪರ್ ಬಸ್‌ನ ಅಪ್ಪರ್ ಬರ್ತ್‌ಗಳನ್ನು ಬುಕ್ ಮಾಡಿಕೊಂಡು ತಮ್ಮ ಜರ್ನಿ ಶುರು ಮಾಡಿದ್ದಾರೆ.
ಮೆಜೆಸ್ಟಿಕ್ ಪಿಕಪ್ ಪಾಯಿಂಟ್‌ನಲ್ಲಿ ಅತಿ ಹೆಚ್ಚು ಪ್ರಯಾಣಿಕರು ಬಸ್ ಹತ್ತಿರುವುದು ಗಮನಾರ್ಹವಾಗಿದೆ. ಇಲ್ಲಿ ಒಟ್ಟು 13 ಮಂದಿ ಬಸ್ ಏರಿದ್ದು, ಸೂರಜ್, ಮಾನಸ, ಮಿಲನ, ಹೇಮರಾಜ್ ಕುಮಾರ್, ಕಲ್ಪನಾ ಪ್ರಜಾಪತಿ, ಶಶಿಕಾಂತ್ ಎಂ, ವಿಜಯ್ ಭಂಡಾರಿ, ನವ್ಯ, ಅಭಿಷೇಕ್, ಕಿರಣ್ ಪಾಲ್ ಎಚ್, ಕೀರ್ತನ್ ಎಂ, ನಂದಿತಾ ಜಿ ಬಿ ಹಾಗೂ ದೇವಿಕಾ ಎಚ್ ಅವರುಗಳು ಸೇರಿದ್ದಾರೆ.
ಯಶವಂತಪುರದ ಗೋವರ್ಧನ್ ಥಿಯೇಟರ್ ಸಮೀಪದಲ್ಲಿ ಮೇಘರಾಜ್, ಮಸ್ರತುನ್ನಿಸಾ ಎಸ್ ಎನ್ ಮತ್ತು ಸೈಯದ್ ಜಮೀರ್ ಗೌಸ್ ಅವರುಗಳು ಬಸ್ ಹತ್ತಿದ್ದಾರೆ. ಬಳಿಕ ಗೊರಗುಂಟೆಪಾಳ್ಯದಲ್ಲಿ ಕೊನೆಯದಾಗಿ ಗಗನಶ್ರೀ ಎಸ್, ರಶ್ಮಿ ಮಹಲೆ ಹಾಗೂ ರಕ್ಷಿತಾ ಆರ್ ಅವರುಗಳು ಬಸ್‌ಗೆ ಸೇರಿದ್ದಾರೆ.
ಈ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದವರಲ್ಲಿ 25 ಮಂದಿ ಗೋಕರ್ಣಕ್ಕೆ ಟಿಕೆಟ್ ಬುಕ್ ಮಾಡಿಕೊಂಡಿದ್ದರು. ಉಳಿದವರಲ್ಲಿ ಇಬ್ಬರು ಶಿವಮೊಗ್ಗಕ್ಕೆ ಹಾಗೂ ಇನ್ನಿಬ್ಬರು ಕುಮಟಾಗೆ ತೆರಳುತ್ತಿದ್ದರು. ಆದರೆ ವಿಧಿಯ ಆಟಕ್ಕೆ ಎಲ್ಲರ ಕನಸುಗಳು ಒಂದೇ ಕ್ಷಣದಲ್ಲಿ ಭಸ್ಮವಾಗಿವೆ. ಈ ದುರಂತ ರಾಜ್ಯದ ಜನರನ್ನು ತೀವ್ರ ದುಃಖಕ್ಕೆ ದೂಡಿದೆ.






