ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಗ್ರಾಮದ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಖಾಸಗಿ ಸ್ಲೀಪರ್ ಕೋಚ್ ಬಸ್ ಹಾಗೂ ಲಾರಿ ನಡುವೆ ಡಿಕ್ಕಿಯಾಗಿ ಬಸ್ ಸಂಪೂರ್ಣವಾಗಿ ಹೊತ್ತಿ ಉರಿದ ಪರಿಣಾಮ 17ಕ್ಕೂ ಹೆಚ್ಚು ಪ್ರಯಾಣಿಕರು ಸಜೀವ ದಹನವಾಗಿದ್ದಾರೆ. ಘಟನೆಯಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಸೀಬರ್ಡ್ ಸ್ಲೀಪರ್ ಕೋಚ್ ಬಸ್ ಅತಿವೇಗದಿಂದ ಸಾಗುತ್ತಿದ್ದ ವೇಳೆ ಮುಂಭಾಗದಲ್ಲಿ ನಿಂತಿದ್ದ ಬೃಹತ್ ಕಂಟೈನರ್ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಯಿಂದ ಬಸ್‌ಗೆ ಕ್ಷಣಾರ್ಧದಲ್ಲಿ ಬೆಂಕಿ ಹತ್ತಿಕೊಂಡಿದ್ದು, ಪ್ರಯಾಣಿಕರು ಹೊರಬರುವಷ್ಟರಲ್ಲಿ ಅಗ್ನಿಕಾಂಡ ವ್ಯಾಪಿಸಿದೆ.
ಬಸ್‌ನಲ್ಲಿ ಒಟ್ಟು 29 ಪ್ರಯಾಣಿಕರು ಇದ್ದ ಮಾಹಿತಿ ಲಭ್ಯವಾಗಿದ್ದು, ಅವರಲ್ಲಿ 15 ಮಹಿಳೆಯರು ಹಾಗೂ 14 ಪುರುಷರು ಸೇರಿದ್ದರು. ಕೆಲವರು ಸಮಯಕ್ಕೆ ಸರಿಯಾಗಿ ಬಸ್‌ನಿಂದ ಇಳಿಯುವಲ್ಲಿ ಯಶಸ್ವಿಯಾದರೂ, 17ಕ್ಕೂ ಹೆಚ್ಚು ಮಂದಿ ಬೆಂಕಿಯ ಕನ್ನಾಲಿಗೆಗೆ ಸಿಲುಕಿ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತದ ನಂತರ ಸುಮಾರು ನಾಲ್ಕು ಕಿಲೋಮೀಟರ್‌ಗೂ ಅಧಿಕ ದೂರದಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿದ್ದು, ಆ್ಯಂಬುಲೆನ್ಸ್‌ಗಳು ಸ್ಥಳಕ್ಕೆ ತಲುಪಲು ತೀವ್ರ ತೊಂದರೆ ಎದುರಾಯಿತು. ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ.
ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಆಘಾತ ಮೂಡಿಸಿದೆ.
ಈ ಭೀಕರ ದುರಂತವು ರಾಜ್ಯಾದ್ಯಂತ ದುಃಖದ ಛಾಯೆ ಹರಡಿಸಿದೆ.






