ಮದುವೆ ಚೌಟ್ರಿಗಳಲ್ಲಿ ಚಿನ್ನಾಭರಣ ಕದ್ದ ಕನ್ನಡ ಪ್ರೊಫೆಸರ್ ಬಂಧನ
ಬೆಂಗಳೂರು/ಚಾಮರಾಜನಗರ, ಡಿಸೆಂಬರ್ 23:
ವಿದ್ಯಾರ್ಥಿಗಳನ್ನು ಸನ್ಮಾರ್ಗಕ್ಕೆ ಕರೆತರುವ ಜವಾಬ್ದಾರಿ ಹೊತ್ತಿದ್ದ ಪ್ರಾಧ್ಯಾಪಕಿಯೇ ತಪ್ಪು ಹಾದಿ ಹಿಡಿದಿರುವ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ವಾರದ ದಿನಗಳಲ್ಲಿ ಖಾಸಗಿ ಕಾಲೇಜಿನಲ್ಲಿ ಕನ್ನಡ ಪಾಠ ಮಾಡುತ್ತಿದ್ದ ಮಹಿಳೆ, ವಾರಾಂತ್ಯ ಬಂದಾಗ ಮದುವೆ ಚೌಟ್ರಿಗಳನ್ನು ಟಾರ್ಗೆಟ್ ಮಾಡಿಕೊಂಡು ಕಳ್ಳತನ ನಡೆಸುತ್ತಿದ್ದುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ಬೆಳ್ಳಂದೂರು ಸಮೀಪದ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿರುವ ರೇವತಿಯನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ. ತನಿಖೆಯ ವೇಳೆ, ಈಕೆ ವಾರಪೂರ್ತಿ ಕಾಲೇಜಿನಲ್ಲಿ ಬೋಧನೆ ಮಾಡುತ್ತಿದ್ದರೆ, ಭಾನುವಾರ ಮಾತ್ರ ಮದುವೆ ಸಮಾರಂಭಗಳಲ್ಲಿ ಸಂಬಂಧಿಕರಂತೆ ಪ್ರವೇಶಿಸಿ, ಅನುಮಾನ ಮೂಡದಂತೆ ಮಾತುಕತೆ ನಡೆಸಿ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದಳು ಎಂಬುದು ಗೊತ್ತಾಗಿದೆ. ಕಳ್ಳತನದ ಬಳಿಕ ಮದುವೆ ಊಟವನ್ನೂ ಮಾಡಿಕೊಳ್ಳುತ್ತಿದ್ದಳು ಎಂಬ ಅಂಶವೂ ಬೆಳಕಿಗೆ ಬಂದಿದೆ.
ಕಳೆದ ನವೆಂಬರ್ 25ರಂದು ಬಸವನಗುಡಿಯ ದ್ವಾರಕನಾಥ್ ಕಲ್ಯಾಣಮಂಟಪದಲ್ಲಿ ಚಿನ್ನಾಭರಣ ಕಳ್ಳತನ ಮಾಡಿದ ಪ್ರಕರಣವೂ ಇದರಲ್ಲಿ ಸೇರಿದೆ. ರೇವತಿ ಮೂಲತಃ ಶಿವಮೊಗ್ಗದವಳಾಗಿದ್ದು, ಕೆ.ಆರ್. ಪುರಂನಲ್ಲಿ ವಾಸವಿದ್ದಳು. ವಿಚಾರಣೆಯ ವೇಳೆ ಒಟ್ಟು ಮೂರು ಕಳ್ಳತನ ಪ್ರಕರಣಗಳಲ್ಲಿ ಈಕೆ ಭಾಗಿಯಾಗಿದ್ದಾಳೆ ಎಂಬುದು ದೃಢಪಟ್ಟಿದೆ.
ದೂರುದಾರನೇ ಆರೋಪಿ!
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಮೂಡುಗೂರು ಗ್ರಾಮದಲ್ಲಿ ನಡೆದ ಸಹಕಾರ ಸಂಘದ ಹಣ ಕಳ್ಳತನ ಪ್ರಕರಣದಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದೆ. ಕಳವು ಸಂಬಂಧ ತೆರಕಣಾಂಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಮೂರ್ತಿಯೇ ಆರೋಪಿ ಎಂದು ತನಿಖೆಯಲ್ಲಿ ಬಯಲಾಗಿದೆ.
ಡಿಸೆಂಬರ್ 17ರಂದು ಕಚೇರಿಯ ಕಬೋರ್ಡ್ನ್ನು ಕಬ್ಬಿಣದ ರಾಡ್ ಬಳಸಿ ಒಡೆದು ₹14.12 ಲಕ್ಷ ಹಣ ಕಳವು ಮಾಡಲಾಗಿತ್ತು. ಬಂಧಿತನಿಂದ ಈವರೆಗೆ ₹8 ಲಕ್ಷ ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.






