ಇತ್ತೀಚೆಗೆ ಶಿವಮೊಗ್ಗ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಅಪ್ರಾಪ್ತ ಬಾಲಕಿಯರು ಮಗುವಿಗೆ ಜನ್ಮ ನೀಡಿದ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಆ ಘಟನೆಗಳ ಚರ್ಚೆ ಮುಗಿಯುವ ಮೊದಲೇ ಹಾಸನ ಜಿಲ್ಲೆಯಿಂದಲೂ ಅದೇ ರೀತಿಯ ಮತ್ತೊಂದು ಕಳವಳಕಾರಿ ಪ್ರಕರಣ ವರದಿಯಾಗಿದೆ.
ಅಪ್ರಾಪ್ತ ಬಾಲಕಿಯನ್ನು ನಿತ್ಯ ಚಾಕೊಲೇಟ್ ನೀಡಿ ಮರುಳುಗೊಳಿಸಿ, ಅವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪರಿಣಾಮ ಆಕೆ ಮಗುವಿಗೆ ಜನ್ಮ ನೀಡಿರುವುದು ಬಹಿರಂಗವಾಗಿದೆ.
ಹಾಸನ ಜಿಲ್ಲೆಯ ಖಾಸಗಿ ಶಾಲೆಯೊಂದರಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕಿಯ ಮೇಲೆ, ಅದೇ ಶಾಲೆಯಲ್ಲಿ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದ ರಂಜಿತ್ ಎಂಬಾತ ಸುಮಾರು ಎಂಟು ತಿಂಗಳ ಕಾಲ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಇದರ ಪರಿಣಾಮವಾಗಿ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಚನ್ನರಾಯಪಟ್ಟಣ ನಗರ ಠಾಣೆಯ ಪೊಲೀಸರು ಈಗಾಗಲೇ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇನ್ನು ಬಾಲಕಿ ಹಾಗೂ ನವಜಾತ ಶಿಶುವನ್ನು ಕೆಲ ದಿನಗಳ ಕಾಲ ಚಿಕಿತ್ಸೆ ಮತ್ತು ಆರೈಕೆ ನೀಡಿದ ಬಳಿಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಾಂತ್ವನ ಕೇಂದ್ರಕ್ಕೆ ಒಪ್ಪಿಸಲಾಗುವುದು ಎಂದು ಹಾಸನ ಜಿಲ್ಲಾ ಆರೋಗ್ಯಾಧಿಕಾರಿ ಅನಿಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






