ರಾಗಿಣಿ ದ್ವಿವೇದಿ ಅವರು ಕನ್ನಡ ಚಿತ್ರರಂಗದಲ್ಲಿ 15 ವರ್ಷಗಳನ್ನು ಪೂರೈಸಿದ್ದಾರೆ. ಇದೇ ಸಂಭ್ರಮದಲ್ಲಿ ಇತ್ತೀಚೆಗೆ ಅದ್ಧೂರಿ ಕಾರ್ಯಕ್ರಮವನ್ನೂ ಅವರು ಆಯೋಜಿಸಿದ್ದರು. ಈ ವೇಳೆ ಅವರು ತಮ್ಮ ಸಿನಿ ಪಯಣ, ಈಗಿನ ಸಿನಿಮಾಗಳು ಹಾಗೂ ಫ್ಯಾನ್ ವಾರ್ ಬಗ್ಗೆಯೂ ಮಾತನಾಡಿದ್ದಾರೆ.ಇನ್ನು ಇತ್ತೀಚೆಗೆ ತೆರೆಕಂಡ ನಟ ದರ್ಶನ್ ತೂಗುದೀಪ ಅಭಿನಯದ ‘ಡೆವಿಲ್’ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುವ ಅವಕಾಶ ನನಗೆ ಸಿಕ್ಕಿತ್ತು. ಆದರೆ ಈ ಒಂದು ಕಾರಣಕ್ಕೆ ನಟಿಸಲ್ಲ ಎಂದು ಹೇಳಿದ್ದಾಗಿ ರಾಗಿಣಿ ಅಚ್ಚರಿ ವಿಚಾರವನ್ನು ಬಹಿರಂಗಪಡಿಸಿದ್ದಾರೆ.
“ಒಂದು ಹಂತದವರೆಗೆ ಸಿಕ್ಕ ಪಾತ್ರಗಳಲ್ಲಿ ನಟಿಸಬೇಕು. ಆ ಹಂತ ದಾಟಿದ ಮೇಲೆ ಪಾತ್ರಗಳನ್ನು ನಾವು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಾವು ಎಲ್ಲ ಪಾತ್ರವನ್ನು ಒಪ್ಪಿಕೊಳ್ಳಲು ಆಗಲ್ಲ. ನಮಗೆ ತಕ್ಕಂತ ಪಾತ್ರವನ್ನಷ್ಟೇ ಮಾಡಬೇಕು. ಈಗ ಸಿನಿಮಾಗಳು ಬದಲಾಗುತ್ತಿವೆ. ಹಾಗಂತ ಯಾವುದೋ ಸಿಕ್ಕ ಪಾತ್ರಗಳನ್ನು ಮಾಡಲು ಆಗುವುದಿಲ್ಲ” ಎಂದು ರಾಗಿಣಿ ಅಭಿಪ್ರಾಯ ತಿಳಿಸಿದ್ದಾರೆ.
“ನಾನು ದರ್ಶನ್ ಅವರ “ಡೆವಿಲ್” ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ ಆ ಪಾತ್ರ ನನಗೆ ಬೇಕಾಗಿರಲಿಲ್ಲ, ಇಷ್ಟವೂ ಆಗಲಿಲ್ಲ. ಹಾಗಾಗಿ ಆ ಪಾತ್ರವನ್ನು ನಾನು ಒಪ್ಪಲಿಲ್ಲ. ಇದು ನನ್ನ ಆಯ್ಕೆಗೆ ಬಿಟ್ಟಿದ್ದು. ಡೆವಿಲ್ ಸಿನಿಮಾದ ಆ ಪಾತ್ರ ನನಗೆ ಇಷ್ಟವಾಗಿಲ್ಲ, ಅದಕ್ಕೇ ಮಾಡಲಿಲ್ಲ. ಯಾವ ಪಾತ್ರ ಎಂದು ನಾನು ಹೇಳಲ್ಲ” ಎಂದಿದ್ದಾರೆ ರಾಗಿಣಿ.
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ದರ್ಶನ್-ಸುದೀಪ್ ಅಭಿಮಾನಿಗಳ ನಡುವಿನ ಫ್ಯಾನ್ ವಾರ್ ಬಗ್ಗೆಯೂ ರಾಗಿಣಿ ಮಾತನಾಡಿದ್ದಾರೆ. “ಫ್ಯಾನ್ ವಾರ್ ಅನ್ನೋದು ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ, ಎಲ್ಲ ಚಿತ್ರರಂಗದಲ್ಲೂ ಇದೆ. ಸ್ಟಾರ್ ಇದ್ದ ಮೇಲೆ ಫ್ಯಾನ್ ಇದ್ದೇ ಇರ್ತಾರೆ. ಪ್ರತಿಯೊಬ್ಬ ನಟರ ಫ್ಯಾನ್ ಬೇಸ್ ಇದ್ದೇ ಇರುತ್ತೆ, ತಮ್ಮ ನೆಚ್ಚಿನ ನಟನಿಗಾಗಿ ಏನು ಮಾಡಬೇಕೋ ಮಾಡ್ತಾರೆ” ಎಂದಿದ್ದಾರೆ.
“ಯಾರ ಯೋಚನೆ ಯಾವ ತರ ಇರುತ್ತೋ ಗೊತ್ತಿಲ್ಲ. ನಾನು ಅದರ ಬಗ್ಗೆ ಕಾಮೆಂಟ್ ಮಾಡಲ್ಲ. ಫ್ಯಾನ್ ವಾರ್ ಆಗಾಗ ಆಗ್ತಿರುತ್ತೆ, ಅದನ್ನ ಜಾಸ್ತಿ ತಲೆಗೆ ಹಾಕಿಕೊಳ್ಳದೆ ಮುಂದೆ ಹೋಗುತ್ತಿರಬೇಕಷ್ಟೇ. ಈಗ ಸುದೀಪ್-ದರ್ಶನ್ ಫ್ಯಾನ್ಸ್ ನಡುವೆ ಫ್ಯಾನ್ ವಾರ್ ನಡೆಯುತ್ತಿರುವ ಬಗ್ಗೆ ನನಗೆ ಮಾಹಿತಿ ಇಲ್ಲ, ನಾನು ನನ್ನ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದೀನಿ”.
“ನನ್ನ ಪ್ರಕಾರ ಸುದೀಪ್ ಅವರು ವೈಯಕ್ತಿಕವಾಗಿ ಏನೂ ಮಾತನಾಡಿರಲ್ಲ, ಅವರೊಬ್ಬ ಮಾಸ್ ಹೀರೋ, ಅವರು ಏನು ಮಾತನಾಡಿದ್ದಾರೋ ನನಗೆ ಗೊತ್ತಿಲ್ಲ. ಎಲ್ಲ ನಟರಿಗೂ ತಮ್ಮ ಫ್ಯಾನ್ಸ್ ಬಗ್ಗೆ ಮಾತನಾಡುತ್ತಾರೆ. ಅವರು ಆಡಿರುವ ಮಾತುಗಳು ಅವರ ಸಿನಿಮಾದ ಡೈಲಾಗ್ ಕೂಡ ಆಗಿರಬಹುದು” ಎಂದಿದ್ದಾರೆ.
“45 ಹಾಗೂ ಮಾರ್ಕ್ ಸಿನಿಮಾ ಒಂದೇ ದಿನ ರಿಲೀಸ್ ಆಗ್ತಿದೆ, ಎರಡೂ ಸಿನಿಮಾ ಚೆನ್ನಾಗಿ ಪ್ರದರ್ಶನ ಕಾಣುತ್ತೆ. ಸಾಲು ಸಾಲು ರಜೆಗಳು ಇರುವುದರಿಂದ ಸ್ಯಾಂಡಲ್‌ವುಡ್‌ಗೆ ವರದಾನ ಅಂತಲೇ ಹೇಳಬಹುದು. ಈ ಎರಡೂ ಸಿನಿಮಾವನ್ನು ಜನ ಹೋಗಿ ನೋಡ್ತಾರೆ, ತುಂಬಾ ದೊಡ್ಡ ಮಟ್ಟದ ಹಿಟ್ ಆಗುತ್ತೆ” ಎಂದು ರಾಗಿಣಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
“ನಾನು ದರ್ಶನ್ ಅವರ ಡೆವಿಲ್ ಸಿನಿಮಾದಲ್ಲಿ ನಟಿಸಬೇಕಿತ್ತು, ಆದರೆ…”: ರಾಗಿಣಿ ದ್ವಿವೇದಿ
By krutika naik
On: December 23, 2025 9:16 AM
---Advertisement---






