ಯಾದಗಿರಿ: ದೇಶ ಹಾಗೂ ಜಿಲ್ಲೆಗೆ ಹೆಮ್ಮೆ ತಂದಿರುವ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುವೊಬ್ಬರು, ಮೂಲಭೂತ ಸೌಲಭ್ಯಗಳ ಕೊರತೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಪದಕಗಳನ್ನು ಕೈಯಲ್ಲಿ ಹಿಡಿದು ಪ್ರತಿಭಟನೆ ನಡೆಸಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಯಾದಗಿರಿ ಜಿಲ್ಲೆಯ ಲೋಕೆಶ್ ರಾಥೋಡ್ ಅವರು ಇದುವರೆಗೆ 50ಕ್ಕೂ ಹೆಚ್ಚು ಪದಕಗಳನ್ನು ವಿವಿಧ ಅಥ್ಲೆಟಿಕ್ಸ್ ಸ್ಪರ್ಧೆಗಳಲ್ಲಿ ಗಳಿಸಿದ್ದು, ಇತ್ತೀಚೆಗೆ ಜೈಪುರದಲ್ಲಿ ನಡೆದ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಆದರೆ ಈ ಸಾಧನೆಗಳ ಬಳಿಕವೂ ಜಿಲ್ಲೆಯಲ್ಲಿ ಸೂಕ್ತ ಕ್ರೀಡಾಂಗಣ ಹಾಗೂ ತರಬೇತಿ ಸೌಲಭ್ಯಗಳಿಲ್ಲದೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಕ್ರೀಡಾಂಗಣದ ಅವ್ಯವಸ್ಥಿತ ಸ್ಥಿತಿಯ ಕಾರಣದಿಂದ ಅಭ್ಯಾಸಕ್ಕಾಗಿ ಪ್ರತಿಬಾರಿ ಬೆಂಗಳೂರುಗೆ ಹೋಗಬೇಕಾದ ಪರಿಸ್ಥಿತಿ ಎದುರಾಗುತ್ತಿದೆ. ಇದರಿಂದ ಸಾವಿರಾರು ರೂಪಾಯಿ ಖರ್ಚಾಗುತ್ತಿದ್ದು, ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸುವುದಕ್ಕೂ ಅಡಚಣೆ ಉಂಟಾಗಿದೆ ಎಂದು ಲೋಕೆಶ್ ತಿಳಿಸಿದ್ದಾರೆ.
ಖೇಲೋ ಇಂಡಿಯಾ ಪದಕ ಗೆದ್ದ ನಂತರವೂ ಜಿಲ್ಲಾಡಳಿತದಿಂದ ಒಂದೇ ಒಂದು ಅಭಿನಂದನಾ ಕರೆ ಕೂಡ ಬರಲಿಲ್ಲ ಎಂದು ಅವರು ನೋವಿನಿಂದ ಹೇಳಿದರು. “ದೇಶಕ್ಕಾಗಿ, ಜಿಲ್ಲೆಗಾಗಿ ಪದಕ ತಂದಿದ್ದರೂ ನಮ್ಮ ಜಿಲ್ಲೆಯಲ್ಲಿ ಅಭ್ಯಾಸಕ್ಕೂ ಜಾಗವಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕ್ರೀಡಾಪಟುಗಳು ಮುಂದೆ ಹೇಗೆ ಬೆಳೆಯಬೇಕು?” ಎಂದು ಕಣ್ಣೀರಿಡಿದರು.
ತಮ್ಮ ಸಾಧನೆಗಳ ಪದಕಗಳನ್ನೇ ಹೋರಾಟದ ಆಯುಧವನ್ನಾಗಿ ಮಾಡಿಕೊಂಡು ನಡೆಸಿದ ಈ ಪ್ರತಿಭಟನೆ, ಸಣ್ಣ ಜಿಲ್ಲೆಗಳಲ್ಲಿನ ಪ್ರತಿಭಾವಂತ ಕ್ರೀಡಾಪಟುಗಳು ಎದುರಿಸುತ್ತಿರುವ ಅವ್ಯವಸ್ಥೆ ಮತ್ತು ನಿರ್ಲಕ್ಷ್ಯವನ್ನು ಮತ್ತೆ ಬೆಳಕಿಗೆ ತಂದಿದೆ.






