ಅನ್ಯ ಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾಗಿ ಗರ್ಭಿಣಿಯಾಗಿದ್ದ 19 ವರ್ಷದ ಯುವತಿಯನ್ನು ಆಕೆಯ ತಂದೆ ಹಾಗೂ ಕುಟುಂಬದ ಸದಸ್ಯರು ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿದ ಘಟನೆ ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ.
ಕೊಲೆಯಾದ ಯುವತಿಯನ್ನು ಮಾನ್ಯಾ ಪಾಟೀಲ್ (19) ಎಂದು ಗುರುತಿಸಲಾಗಿದೆ. ಈ ಘಟನೆ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ.
ಇನಾಂವೀರಾಪುರ ಗ್ರಾಮದ ವಿವೇಕಾನಂದ ಮತ್ತು ಮಾನ್ಯಾ ಹಲವು ವರ್ಷಗಳಿಂದ ಪರಸ್ಪರ ಪರಿಚಯ ಹೊಂದಿದ್ದರು. ಮಾನ್ಯಾ ವರೂರು ಖಾಸಗಿ ಕಾಲೇಜಿನಲ್ಲಿ ಡಿಗ್ರಿ ವ್ಯಾಸಂಗ ಮಾಡುತ್ತಿದ್ದರೆ, ವಿವೇಕಾನಂದ ಹುಬ್ಬಳ್ಳಿಯ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ. ಆರಂಭದಲ್ಲಿ ಸ್ನೇಹವಾಗಿದ್ದ ಇವರ ಸಂಬಂಧ, ಇನ್ಸ್ಟಾಗ್ರಾಂ ಮೂಲಕ ಸಂವಹನ ಹೆಚ್ಚಿದಂತೆ ಪ್ರೀತಿಯಾಗಿ ಬೆಳೆದಿತ್ತು.
ಇವರ ಪ್ರೀತಿಯ ವಿಚಾರ ಎರಡೂ ಕುಟುಂಬಗಳಿಗೆ ತಿಳಿದಿತ್ತು. ಆದರೆ ಮಾನ್ಯಾ ಲಿಂಗಾಯತ ಸಮಾಜದವಳಾಗಿದ್ದು, ವಿವೇಕಾನಂದ ದಲಿತ ಸಮುದಾಯಕ್ಕೆ ಸೇರಿದವನಾಗಿದ್ದ ಕಾರಣ ಯುವತಿಯ ಮನೆಯವರು ಈ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಆದರೂ ವಿವೇಕಾನಂದನನ್ನೇ ಮದುವೆಯಾಗುತ್ತೇನೆ ಎಂದು ಮಾನ್ಯಾ ಹಠ ಹಿಡಿದಿದ್ದಳು. ಧಾರವಾಡದಲ್ಲಿ ಕೋಚಿಂಗ್ಗೆ ಹೋಗಿದ್ದ ವಿವೇಕಾನಂದನ ಬಳಿ ಮಾನ್ಯಾ ಹೋಗಿ, ಮದುವೆಯಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾಳೆ. ಈ ಹಿನ್ನೆಲೆ ಇಬ್ಬರೂ ಕಳೆದ ಜೂನ್ 19ರಂದು ಹುಬ್ಬಳ್ಳಿಯಲ್ಲಿ ರಿಜಿಸ್ಟರ್ ವಿವಾಹ ಮಾಡಿಕೊಂಡಿದ್ದರು.
ರಿಜಿಸ್ಟರ್ ಮದುವೆಯ ನಂತರ ಪೊಲೀಸರು ಎರಡೂ ಕುಟುಂಬಗಳನ್ನು ಕರೆಸಿ ರಾಜಿ ಪಂಚಾಯಿತಿ ನಡೆಸಿದ್ದರು. ಬಳಿಕ ಮಾನ್ಯಾ ಮತ್ತು ವಿವೇಕಾನಂದ ಊರು ಬಿಟ್ಟು ಹಾವೇರಿಯಲ್ಲಿ ನೆಲೆಸಿದ್ದರು. ಈ ಅವಧಿಯಲ್ಲಿ ಮಾನ್ಯಾ ಗರ್ಭಿಣಿಯಾಗಿದ್ದಳು. ಏಳು ತಿಂಗಳ ನಂತರ ಪರಿಸ್ಥಿತಿ ಶಾಂತವಾಗಬಹುದು ಎಂಬ ನಿರೀಕ್ಷೆಯಲ್ಲಿ ಡಿಸೆಂಬರ್ 8ರಂದು ಇಬ್ಬರೂ ಸ್ವಗ್ರಾಮಕ್ಕೆ ಮರಳಿದ್ದರು.
ಸ್ವಗ್ರಾಮಕ್ಕೆ ಬಂದ ಬಳಿಕ ಮತ್ತೆ ಕುಟುಂಬಗಳ ನಡುವೆ ವಿವಾದ ಆರಂಭಗೊಂಡಿದ್ದು, ಗ್ರಾಮೀಣ ಠಾಣೆ ಪೊಲೀಸರು ಮತ್ತೊಮ್ಮೆ ಎರಡೂ ಕಡೆಯವರನ್ನು ಕರೆಸಿ ರಾಜಿ ಸಂಧಾನ ಮಾಡಿಸಿದ್ದರು. ಆದರೆ ಈ ಸಂಧಾನದ ಎರಡೇ ವಾರದಲ್ಲಿ ಭೀಕರ ಘಟನೆ ನಡೆದಿದೆ.
ಭಾನುವಾರ ಸಂಜೆ ಮಾನ್ಯಾಳ ತಂದೆ ಪ್ರಕಾಶಗೌಡ ಪಾಟೀಲ್ ಹಾಗೂ ಸಂಬಂಧಿಕರು ವಿವೇಕಾನಂದ ಮನೆಗೆ ನುಗ್ಗಿ ಮಾನ್ಯಾ, ಆಕೆಯ ಅತ್ತೆ ಸೇರಿ ಮೂವರ ಮೇಲೆ ಹಲ್ಲೆ ನಡೆಸಿದ್ದಾರೆ. ಪ್ರಕಾಶಗೌಡ ಪೈಪ್ ಮತ್ತು ಗುದ್ದಲಿಯಿಂದ ಮಾನ್ಯಾಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ.
ಗಂಭೀರವಾಗಿ ಗಾಯಗೊಂಡ ಮಾನ್ಯಾಳನ್ನು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಮಾನ್ಯಾ ಮೃತಪಟ್ಟಿದ್ದಾಳೆ. ಈ ದಾಳಿಯಲ್ಲಿ ಗಾಯಗೊಂಡಿರುವ ಅತ್ತೆ ಹಾಗೂ ಇತರರು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಧಾರವಾಡ ಎಸ್ಪಿ ಗುಂಜನ್ ಆರ್ಯ ಅವರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಾನ್ಯಾಳ ತಂದೆ ಪ್ರಕಾಶಗೌಡ ಪಾಟೀಲ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರೀತಿಸಿ ಮದುವೆಯಾಗಿ ತನ್ನ ಜೀವನ ಕಟ್ಟಿಕೊಳ್ಳಲು ಹೊರಟಿದ್ದ ಯುವತಿಯನ್ನು ಸ್ವತಃ ತಂದೆಯೇ ಮರ್ಯಾದಾ ಹತ್ಯೆ ಮಾಡಿರುವುದು ಅತ್ಯಂತ ದುರ್ಘಟನೆಯಾಗಿದ್ದು, ಸಮಾಜವನ್ನು ಆತ್ಮಾವಲೋಕನಕ್ಕೆ ದೂಡಿದ ಘಟನೆ ಇದಾಗಿದೆ.






