ಹೋಟೆಲ್‌ನಲ್ಲಿ ತಪ್ಪಾಗಿ ಬೇರೆ ಕೊಠಡಿಯ ಬಾಗಿಲು ತಟ್ಟಿದ ಮಹಿಳೆಯೊಬ್ಬರ ಮೇಲೆ ಕುಡಿದ ಮತ್ತಿನಲ್ಲಿದ್ದ ಮೂವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿದ ಭೀಕರ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರದಲ್ಲಿ ನಡೆದಿದೆ. ಈ ಅಮಾನವೀಯ ಘಟನೆ ಸ್ಥಳೀಯ ಹೋಟೆಲ್‌ನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 30 ವರ್ಷದ ಮಹಿಳೆ, ಹೋಟೆಲ್‌ನ ರೂಮ್ ನಂ.105ರಲ್ಲಿ ತಂಗಿದ್ದ ತಮ್ಮ ಸ್ನೇಹಿತೆಯಿಂದ ಹಣ ಪಡೆಯಲು ಆಗಮಿಸಿದ್ದರು. ಕೆಲ ಸಮಯ ಹೊರಗೆ ಹೋಗಿ ಮರಳಿ ಬಂದ ವೇಳೆ ಗೊಂದಲಗೊಂಡ ಅವರು ತಪ್ಪಾಗಿ ರೂಮ್ ನಂ.205ರ ಬಾಗಿಲು ತಟ್ಟಿದ್ದಾರೆ ಎನ್ನಲಾಗಿದೆ.
ಆ ಸಮಯದಲ್ಲಿ ಆ ಕೊಠಡಿಯಲ್ಲಿ ಘನಶ್ಯಾಮ್ ಭೌಲಾಲ್ ರಾಥೋಡ್, ರಿಷಿಕೇಶ್ ತುಳಸಿರಾಮ್ ಚವಾಣ್ ಹಾಗೂ ಕಿರಣ್ ಲಕ್ಷ್ಮಣ್ ರಾಥೋಡ್ ಎಂಬ ಮೂವರು ಮದ್ಯಪಾನದಲ್ಲಿ ತೊಡಗಿಕೊಂಡಿದ್ದರು. ಬಾಗಿಲು ತೆರೆದ ತಕ್ಷಣ ಪರಿಸ್ಥಿತಿ ಅರ್ಥವಾಗುವ ಮೊದಲೇ ಆರೋಪಿಗಳು ಮಹಿಳೆಯನ್ನು ಒಳಗೆ ಎಳೆದುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಮಹಿಳೆಯನ್ನು ಬಲವಂತವಾಗಿ ಮದ್ಯ ಸೇವಿಸಲು ಫೋರ್ಸ್ ಮಾಡಿ, ರಾತ್ರಿಯಿಡೀ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ಆರೋಪಿಸಲಾಗಿದೆ. ಬೆಳಗಿನ ಜಾವ ಸುಮಾರು 3 ರಿಂದ 4 ಗಂಟೆಯ ವೇಳೆಗೆ ಮಹಿಳೆ ಅಲ್ಲಿಂದ ತಪ್ಪಿಸಿಕೊಂಡು ಕಿರುಚುತ್ತಾ ಹೊರಗೆ ಓಡಿ, ನೇರವಾಗಿ ವೇದಾಂತ್ ನಗರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ಪ್ರಕರಣದ ತೀವ್ರತೆಯನ್ನು ಗಮನಿಸಿದ ಪೊಲೀಸರು ತಕ್ಷಣವೇ ತನಿಖೆ ಆರಂಭಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಬಳಿಕ ಕೇವಲ ಮೂರು ಗಂಟೆಗಳಲ್ಲೇ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆಯನ್ನು ಮುಂದುವರಿಸಿದ್ದಾರೆ.
ಹೋಟೆಲ್‌ನಲ್ಲಿ ತಪ್ಪು ಕೊಠಡಿ ಬಾಗಿಲು ತಟ್ಟಿದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ: ಮಹಾರಾಷ್ಟ್ರದಲ್ಲಿ ಭೀಕರ ಘಟನೆ..
By krutika naik
On: December 20, 2025 4:06 AM
---Advertisement---






