ಉತ್ತರ ಪ್ರದೇಶದ ಜೌನ್ಪುರದಲ್ಲಿ ಬೆಚ್ಚಿ ಬೀಳಿಸುವ ಹತ್ಯಾಕಾಂಡವೊಂದು ಬೆಳಕಿಗೆ ಬಂದಿದೆ. 60 ವರ್ಷಕ್ಕೂ ಅಧಿಕ ವಯಸ್ಸಿನ ದಂಪತಿಯನ್ನು ಅವರದೇ ಪುತ್ರ ನಿರ್ದಯವಾಗಿ ಕೊಲೆ ಮಾಡಿ, ಶವಗಳನ್ನು ತುಂಡು ತುಂಡಾಗಿ ಕತ್ತರಿಸಿ ನದಿಗೆಸೆದಿರುವ ಘಟನೆ ನಡೆದಿದೆ.
ಎಂಜಿನಿಯರ್ ಆಗಿರುವ ಅಂಬೇಶ್ ತನ್ನ ಹೆತ್ತವರಾದ ಶ್ಯಾಮ್ ಬಹದ್ದೂರ್ (62) ಹಾಗೂ ಬಬಿತಾ (60) ಅವರನ್ನು ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅಂಬೇಶ್ ಮುಸ್ಲಿಂ ಯುವತಿಯನ್ನು ವಿವಾಹವಾಗಿದ್ದ ವಿಚಾರಕ್ಕೆ ಸಂಬಂಧಿಸಿ ಆತನ ಮತ್ತು ಪೋಷಕರ ನಡುವೆ ದೀರ್ಘಕಾಲದಿಂದ ಜಗಳ ನಡೆಯುತ್ತಿತ್ತು. ಈ ವಿವಾಹಕ್ಕೆ ಕುಟುಂಬದವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಇತ್ತೀಚೆಗೆ ಅಂಬೇಶ್ ಮತ್ತು ಆತನ ಪತ್ನಿ ಬೇರೆಯಾಗಲು ನಿರ್ಧರಿಸಿದ್ದು, ಜೀವನಾಂಶ ಪಾವತಿಗಾಗಿ ಹಣದ ಅಗತ್ಯ ಎದುರಾಗಿದೆ. ಇದಕ್ಕಾಗಿ ಅಂಬೇಶ್ ತನ್ನ ತಂದೆಯನ್ನು ಹಣಕಾಸು ಸಹಾಯ ಕೇಳಿದ್ದಾನೆ. ಆದರೆ ಶ್ಯಾಮ್ ಬಹದ್ದೂರ್ ಸಹಾಯ ನಿರಾಕರಿಸಿದ್ದೇ ಕೊನೆಯ ಜಗಳಕ್ಕೆ ಕಾರಣವಾಗಿದೆ ಎನ್ನಲಾಗಿದೆ.
ಕೋಪಗೊಂಡ ಅಂಬೇಶ್ ಮೊದಲು ತಾಯಿ ಬಬಿತಾಳನ್ನು ರುಬ್ಬುವ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದು, ಬಳಿಕ ತಂದೆ ಶ್ಯಾಮ್ ಬಹದ್ದೂರ್ ಮೇಲೆ ಪುನಃಪುನಃ ಹಲ್ಲೆ ನಡೆಸಿ ಹತ್ಯೆಗೈದಿದ್ದಾನೆ. ನಂತರ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಶವಗಳನ್ನು ಆರು ತುಂಡುಗಳಾಗಿ ಕತ್ತರಿಸಿ, ಚೀಲಗಳಲ್ಲಿ ತುಂಬಿ ಕಾರಿನಲ್ಲಿ ಕೊಂಡೊಯ್ದು ನದಿಗೆಸೆದಿದ್ದಾನೆ ಎಂದು ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾನೆ.
ಡಿಸೆಂಬರ್ 13ರಂದು ಅಂಬೇಶ್ನ ಸಹೋದರಿ ವಂದನಾ ಜೌನ್ಪುರದ ಜಫರಾಬಾದ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಡಿಸೆಂಬರ್ 8ರಂದು ಅಂಬೇಶ್ ಕರೆ ಮಾಡಿ, ಪೋಷಕರು ಜಗಳವಾಡಿ ಮನೆಯಿಂದ ಹೊರಟಿದ್ದಾರೆ ಎಂದು ಹೇಳಿದ್ದನು. ಆ ಬಳಿಕ ಅವನ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಪೊಲೀಸರಿಗೆ ಅನುಮಾನ ಹುಟ್ಟಿಸಿತ್ತು.
ಒಂದು ವಾರದ ತನಿಖೆಯ ನಂತರ ಅಂಬೇಶ್ನ್ನು ಬಂಧಿಸಿದ ಪೊಲೀಸರು, ವಿಚಾರಣೆ ನಡೆಸಿದಾಗ ಈ ಭೀಕರ ಕೊಲೆ ರಹಸ್ಯ ಬಹಿರಂಗವಾಗಿದೆ. ಈ ಘಟನೆ ಅಂತರ್ಧಾರ್ಮಿಕ ವಿವಾಹ, ಕುಟುಂಬ ಕಲಹ ಮತ್ತು ಹಣಕಾಸಿನ ಒತ್ತಡಗಳು ಎಷ್ಟು ಭೀಕರ ಪರಿಣಾಮಗಳಿಗೆ ದಾರಿ ಮಾಡಿಕೊಡಬಹುದು ಎಂಬುದಕ್ಕೆ ಕಟು ಉದಾಹರಣೆಯಾಗಿದೆ.






