ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಧಾರವಾಡ ಜಿಲ್ಲೆಯ ಕ್ಯಾರಕೊಪ್ಪ ರೈಲ್ವೆ ಗೇಟ್ ಸಮೀಪ ನಡೆದಿದೆ. ಬಳ್ಳಾರಿ ಮೂಲದ ಪಲ್ಲವಿ (24) ಮೃತ ಯುವತಿಯಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಧಾರವಾಡಕ್ಕೆ ಬಂದಿದ್ದಳು ಎಂದು ತಿಳಿದುಬಂದಿದೆ. ಸಾವಿನ ಬಗ್ಗೆ ಅನುಮಾನ ವ್ಯಕ್ತವಾದ ಹಿನ್ನೆಲೆ ಪರಿಶೀಲನೆ ನಡೆಸಿದಾಗ, ಆಕೆಯ ಪ್ಯಾಂಟ್ ಕಿಸೆಯಲ್ಲಿ ಡೆತ್ನೋಟ್ ಪತ್ತೆಯಾಗಿದೆ.
ಮೃತ ಪಲ್ಲವಿಯ ಬಳಿ ಎರಡು ಪುಟಗಳ ಡೆತ್ನೋಟ್ ದೊರೆತಿದ್ದು, ಅದರಲ್ಲಿ ಪೋಷಕರ ಕುರಿತು ಆಕೆ ಅಸಮಾಧಾನ ವ್ಯಕ್ತಪಡಿಸಿರುವುದು ಕಂಡುಬಂದಿದೆ. ನನಗೆ ಯಾವತ್ತೂ ಪ್ರೀತಿ ಸಿಗಲಿಲ್ಲ, ಹಾಸ್ಟೆಲ್ನಲ್ಲೇ ನನ್ನ ಬೆಳೆಸಲಾಯಿತು, ನನ್ನ ಬೇಕು–ಬೇಡಗಳ ಬಗ್ಗೆ ಯಾರೂ ವಿಚಾರಿಸಲಿಲ್ಲ ಎಂಬ ನೋವಿನ ಮಾತುಗಳನ್ನು ಡೆತ್ನೋಟ್ನಲ್ಲಿ ಬರೆದಿದ್ದಾಳೆ ಎಂದು ತಿಳಿದುಬಂದಿದೆ.
ಇನ್ನು ಮತ್ತೊಂದು ಡೆತ್ನೋಟ್ ಪಲ್ಲವಿಯ ವಾಸವಿದ್ದ ರೂಮಿನಲ್ಲಿ ಪತ್ತೆಯಾಗಿದ್ದು, ಅದರಲ್ಲಿ ತಾನು ಪ್ರೀತಿಸಿದ್ದ ಯುವಕನಿಗೆ ಕ್ಷಮೆ ಕೇಳಿದ್ದಾಳೆ. ಕುಟುಂಬದವರು ನಮ್ಮಿಬ್ಬರು ಜೊತೆಯಾಗಿ ಬದುಕಲು ಅವಕಾಶ ನೀಡಲಿಲ್ಲ, ಇದರಿಂದಾಗಿ ಮನಸ್ಸಿಗೆ ಬಹಳ ನೋವಾಗಿದೆ. ಈ ಸಾವಿಗೆ ನಾನೇ ಹೊಣೆ, ನನ್ನನ್ನು ಕ್ಷಮಿಸು ಎಂದು ಆಕೆ ಸ್ಪಷ್ಟವಾಗಿ ಉಲ್ಲೇಖಿಸಿದ್ದಾಳೆ.
ಪಲ್ಲವಿ ಹಾಗೂ ಬಳ್ಳಾರಿ ತಾಲೂಕಿನ ದಮ್ಮೂರು ಕಗ್ಗಲ್ಲು ಗ್ರಾಮದ ನಿವಾಸಿಯಾದ ಯುವಕ ಪರಸ್ಪರ ಪ್ರೀತಿಸುತ್ತಿದ್ದರು. ಈ ಸಂಬಂಧವನ್ನು ಪಲ್ಲವಿ ಮನೆಯವರ ಗಮನಕ್ಕೂ ತಂದಿದ್ದರೂ, ಕುಟುಂಬದವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ತಾಯಿಯ ಸಂಬಂಧಿಕನೊಬ್ಬರೊಂದಿಗೆ ಪಲ್ಲವಿಯ ಮದುವೆಯನ್ನು ನಿಶ್ಚಯ ಮಾಡಲಾಗಿತ್ತು. ಈ ಎಲ್ಲ ಕಾರಣಗಳಿಂದಾಗಿ ಆಕೆ ತೀವ್ರ ಮಾನಸಿಕ ನೋವಿಗೆ ಒಳಗಾಗಿದ್ದಳು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.
ಈ ಘಟನೆ ಕುರಿತು ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿರುವ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಯುವತಿ ವೈಯಕ್ತಿಕ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ನೇಮಕಾತಿ ಪ್ರಕ್ರಿಯೆ ವಿಫಲವಾದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಅಪಪ್ರಚಾರ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ. ಪಲ್ಲವಿ ಸಾವಿಗೂ ಉದ್ಯೋಗ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ. ಆಕೆಯ ಬಳಿ ಸಿಕ್ಕಿರುವ ಎರಡು ಡೆತ್ನೋಟ್ಗಳಲ್ಲಿ ವೈಯಕ್ತಿಕ ಕಾರಣಗಳನ್ನೇ ಉಲ್ಲೇಖಿಸಿರುವುದರಿಂದ, ತಪ್ಪು ಮಾಹಿತಿ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಧಾರವಾಡ: ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಯುವತಿ ಆತ್ಮಹತ್ಯೆ; ಎರಡು ಡೆತ್ನೋಟ್ ಪತ್ತೆ
By krutika naik
On: December 17, 2025 3:50 PM
---Advertisement---






