ಕಾರವಾರ, ಡಿಸೆಂಬರ್ 17: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕದಂಬ ನೌಕಾನೆಲೆ ಪ್ರದೇಶದಲ್ಲಿ ಚೀನಾದ ಜಿಪಿಎಸ್ ಟ್ರ್ಯಾಕರ್ ಅಳವಡಿಸಲಾದ ವಲಸಿಗ ಸೀಗಲ್ ಹಕ್ಕಿಯೊಂದು ಮಂಗಳವಾರ ಕಾಣಿಸಿಕೊಂಡಿದ್ದು, ಭದ್ರತಾ ವಲಯದಲ್ಲಿ ಆತಂಕ ಮೂಡಿಸಿದೆ.
ಟ್ರ್ಯಾಕರ್ ಹೊಂದಿದ್ದ ಸೀಗಲ್ ಹಕ್ಕಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿದ್ದು, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಘಟನೆ ಕಾರವಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಳೆದ ವರ್ಷ ಕಾರವಾರದ ಸಮೀಪ ಜಿಪಿಎಸ್ ಟ್ರಾನ್ಸ್‌ಮೀಟರ್ ಅಳವಡಿಸಿದ್ದ ರಣಹದ್ದು ಪತ್ತೆಯಾಗಿದ್ದ ಪ್ರಕರಣದ ಬಳಿಕ ಇದೀಗ ಮತ್ತೊಂದು ಇಂತಹ ಘಟನೆ ಮರುಕಳಿಸಿರುವುದು ಚರ್ಚೆಗೆ ಕಾರಣವಾಗಿದೆ.
ಕರ್ನಾಟಕದ ಒಳನಾಡು ಭಾಗಗಳಲ್ಲಿ ಚಳಿ ಹೆಚ್ಚಿದ್ದರೂ, ಕರಾವಳಿ ಪ್ರದೇಶಗಳಲ್ಲಿ ತಾಪಮಾನ ಹೆಚ್ಚಿರುವ ಕಾರಣ ಸೀಗಲ್ ಹಕ್ಕಿಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಇದೇ ವೇಳೆ ವಲಸಿಗ ಸೀಗಲ್ ಹಕ್ಕಿಯಲ್ಲಿ ಚೀನಾದ ಜಿಪಿಎಸ್ ಟ್ರ್ಯಾಕರ್ ಪತ್ತೆಯಾಗಿರುವುದು ಸ್ಥಳೀಯರು ಹಾಗೂ ಪೊಲೀಸರಲ್ಲಿ ಆತಂಕ ಹುಟ್ಟಿಸಿದೆ.
ಪತ್ತೆಯಾದ ಜಿಪಿಎಸ್ ಟ್ರ್ಯಾಕರ್‌ನಲ್ಲಿ ‘ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್ – ಇಕೋ ಎನ್ವಿರಾನ್ಮೆಂಟ್ ಸೈನ್ಸ್’ ಎಂಬ ಉಲ್ಲೇಖ ಕಂಡುಬಂದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಸೀಗಲ್ ಹಕ್ಕಿಗಳ ಚಲನವಲನ, ಆಹಾರ ಪದ್ಧತಿ ಹಾಗೂ ವಲಸೆ ಅಧ್ಯಯನಕ್ಕಾಗಿ ಈ ಟ್ರ್ಯಾಕರ್ ಅಳವಡಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಸದ್ಯ ಸೀಗಲ್ ಹಕ್ಕಿಯನ್ನು ಮರೈನ್ ಅರಣ್ಯ ವಿಭಾಗದ ಕಚೇರಿಗೆ ಸ್ಥಳಾಂತರಿಸಲಾಗಿದ್ದು, ಸಂಬಂಧಿಸಿದ ಮಾಹಿತಿಗಾಗಿ ಅರಣ್ಯ ಅಧಿಕಾರಿಗಳು ಚೀನಾದ ಅಕಾಡೆಮಿಯನ್ನು ಸಂಪರ್ಕಿಸುತ್ತಿದ್ದಾರೆ. ಹಕ್ಕಿ ಪತ್ತೆಯಾದ ಪ್ರದೇಶ ನೌಕಾನೆಲೆ ಭದ್ರತಾ ವಲಯಕ್ಕೆ ಒಳಪಟ್ಟಿರುವುದರಿಂದ, ನೌಕಾದಳ ಹಾಗೂ ಪೊಲೀಸರು ಸಂಯುಕ್ತವಾಗಿ ತನಿಖೆ ಆರಂಭಿಸಿದ್ದಾರೆ.






