ಶಿವಮೊಗ್ಗ, ಡಿಸೆಂಬರ್ 17:
ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ತಮ್ಮನನ್ನು ಅಣ್ಣನೇ ಕೊಲೆ ಮಾಡಿದ ಭೀಕರ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಜೇಡಿಗೆರೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಮಿಸ್ಸಿಂಗ್ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಪ್ರಕರಣದಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ನಾಪತ್ತೆಯಾಗಿದ್ದ ವ್ಯಕ್ತಿಯ ಶವ ತೋಟದಲ್ಲಿ ಹೂತಿರುವುದು ಪತ್ತೆಯಾಗಿದೆ.
ರಾಮಚಂದ್ರ (28) ಕೊಲೆಯಾದ ವ್ಯಕ್ತಿಯಾಗಿದ್ದು, ಆತನ ಅಣ್ಣ ಮಾಲತೇಶ್ ಕೊಲೆ ಆರೋಪಿಯಾಗಿದ್ದಾನೆ. ಒಂದೂವರೆ ತಿಂಗಳ ಹಿಂದೆ ರಾಮಚಂದ್ರ ನಾಪತ್ತೆಯಾಗಿದ್ದ ಬಗ್ಗೆ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ವೇಳೆ ಮೊಬೈಲ್ ಟವರ್ ಲೊಕೇಶನ್ ಸೇರಿದಂತೆ ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಆಧರಿಸಿ ಪೊಲೀಸರು ತನಿಖೆ ಮುಂದುವರೆಸಿದಾಗ, ಕೊಲೆಯ ಸತ್ಯ ಬಹಿರಂಗವಾಗಿದೆ.
ಪತ್ನಿಯೊಂದಿಗೆ ತಮ್ಮ ರಾಮಚಂದ್ರನ ಅನೈತಿಕ ಸಂಬಂಧದ ವಿಚಾರಕ್ಕೆ ಅಣ್ಣ ಮಾಲತೇಶ್ ತೀವ್ರ ಅಸಮಾಧಾನಗೊಂಡಿದ್ದನು. ಇದರಿಂದ ಕೋಪಗೊಂಡ ಆತ, ರಾಮಚಂದ್ರನನ್ನು ಕೊಲ್ಲಲು ಪೂರ್ವ ಯೋಜನೆ ರೂಪಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬೇಗ ಮದುವೆಯಾಗಲೆಂದು ಪೂಜೆ ಮಾಡುವ ನೆಪದಲ್ಲಿ, ಜೇಡಿಗೆರೆ ಬಳಿ ತಾನು ಕೆಲಸ ಮಾಡುತ್ತಿದ್ದ ತೋಟಕ್ಕೆ ತಮ್ಮನನ್ನು ಕರೆದುಕೊಂಡು ಹೋಗಿದ್ದಾನೆ.
ಅಲ್ಲಿ ಪೂಜೆ ನೆಪದಲ್ಲಿ ಮದ್ಯ ಕುಡಿಸಿ, ನಂತರ ಕಂಬಕ್ಕೆ ಕಟ್ಟಿ ರಾಮಚಂದ್ರನ ಕುತ್ತಿಗೆಯನ್ನು ಹಿಸುಕಿ ಕೊಲೆ ಮಾಡಿದ್ದಾನೆ. ಕೊಲೆಗೆ ಮೊದಲೇ ಶವ ಹೂತು ಹಾಕಲು ಗುಂಡಿ ತೋಡಿ ಸಿದ್ಧತೆ ಮಾಡಿಕೊಂಡಿದ್ದ ಆರೋಪಿ, ಕೊಲೆಯ ಬಳಿಕ ಶವವನ್ನು ಅದೇ ಗುಂಡಿಯಲ್ಲಿ ಹೂತು ಹಾಕಿದ್ದಾನೆ.
ರಾಮಚಂದ್ರ ನಾಪತ್ತೆಯಾಗಿದ್ದರೂ ಕುಟುಂಬದ ಮುಂದೆ ಮಾಲತೇಶ್ ತಾನು ಅಮಾಯಕನಂತೆ ವರ್ತಿಸುತ್ತಿದ್ದ. ಆದರೆ, ತನಿಖೆಯ ವೇಳೆ ಸಿಕ್ಕ ಸಾಕ್ಷ್ಯಾಧಾರಗಳ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಸಂಪೂರ್ಣ ಕೊಲೆ ಕಥೆ ಬಯಲಾಗಿದ್ದು, ತೋಟದಲ್ಲಿ ಗುಂಡಿ ತೆಗೆದು ಪರಿಶೀಲನೆ ನಡೆಸಿದಾಗ ರಾಮಚಂದ್ರನ ಶವ ಪತ್ತೆಯಾಗಿದೆ.
ಈ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.







1 thought on “ಪತ್ನಿಯೊಂದಿಗೆ ಅನೈತಿಕ ಸಂಬಂಧ ಶಂಕೆ: ತೋಟಕ್ಕೆ ಕರೆದೊಯ್ದು ತಮ್ಮನನ್ನು ಕೊಂದ ಅಣ್ಣ”
Comments are closed.