ಬೆಂಗಳೂರಿನಲ್ಲಿ ಮಗಳ ವಿಚಾರಕ್ಕೆ ಸಂಬಂಧಿಸಿ ಪತಿಯೊಬ್ಬರು ತಮ್ಮದೇ ಪತ್ನಿಯನ್ನು ಅಪಹರಿಸಿದ ಘಟನೆ ಬೆಳಕಿಗೆ ಬಂದಿದೆ. ನಟಿ ಚೈತ್ರಾ ಅವರನ್ನು ಅಪಹರಿಸಿ, ಮಗಳನ್ನು ಒಪ್ಪಿಸುವಂತೆ ಪತಿ ಒತ್ತಾಯಿಸಿದ್ದಾನೆ ಎನ್ನಲಾಗಿದೆ. ಮೈಸೂರಿನಲ್ಲಿ ಶೂಟಿಂಗ್ ಇದೆ ಎಂದು ನಂಬಿಸಿ ಕರೆಸಿಕೊಂಡು, ನಂತರ ಸ್ನೇಹಿತನ ಸಹಾಯದಿಂದ ನೈಸ್ ರೋಡ್ ಬಳಿ ಅಪಹರಣ ನಡೆಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ನಟಿ ಚೈತ್ರಾ ಹಾಗೂ ನಿರ್ಮಾಪಕ ಹರ್ಷವರ್ಧನ್ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ಆದರೆ ಕೌಟುಂಬಿಕ ಕಲಹಗಳಿಂದಾಗಿ ಇಬ್ಬರೂ ದೂರವಾಗಿದ್ದು, ಒಂದು ವರ್ಷದ ಮಗಳು ಚೈತ್ರಾ ಅವರ ಜೊತೆಗೇ ಇದ್ದಾಳೆ. ಮಗಳನ್ನು ನೋಡಲು ಅವಕಾಶ ಸಿಗದೆ ಬೇಸರಗೊಂಡ ಹರ್ಷವರ್ಧನ್, ಪತ್ನಿಯನ್ನು ಅಪಹರಿಸಿ ಮಗುವನ್ನು ಒಪ್ಪಿಸುವಂತೆ ಒತ್ತಡ ಹಾಕಿದ್ದಾನೆ ಎನ್ನಲಾಗಿದೆ.
ಅಪಹರಣದ ಬಳಿಕ ಚೈತ್ರಾ ಅವರ ತಾಯಿಗೆ ಕರೆ ಮಾಡಿದ ಹರ್ಷವರ್ಧನ್, “ನನ್ನ ಮಗಳನ್ನು ತಂದುಕೊಟ್ಟರೆ ನಿಮ್ಮ ಮಗಳನ್ನು ಬಿಡುತ್ತೇನೆ” ಎಂದು ಬೆದರಿಕೆ ಹಾಕಿದ್ದಾನೆ. ಈ ವಿಷಯ ತಿಳಿದ ಚೈತ್ರಾ ಅವರ ಸಹೋದರಿ ತಕ್ಷಣ ಬ್ಯಾಟರಾಯನಪುರ ಪೊಲೀಸರಿಗೆ ದೂರು ನೀಡಿದ್ದಾರೆ.
ಹರ್ಷವರ್ಧನ್ ವರ್ಧನ್ ಸಿನಿಮಾಸ್ ಹೆಸರಿನ ನಿರ್ಮಾಣ ಸಂಸ್ಥೆ ಹೊಂದಿದ್ದು, ‘ನಿನ್ನಲ್ಲೇನೋ ಹೇಳಬೇಕು’ ಎಂಬ ಚಿತ್ರವನ್ನು ನಿರ್ಮಿಸಿದ್ದರು. ಅದೇ ಚಿತ್ರದಲ್ಲಿ ಚೈತ್ರಾ ನಟಿಸಿದ್ದರು. ಆ ನಂತರ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದು, ದಂಪತಿಗೆ ಹೆಣ್ಣು ಮಗು ಜನಿಸಿದೆ. ಆದರೆ ದಾಂಪತ್ಯದಲ್ಲಿ ಉಂಟಾದ ಭಿನ್ನಾಭಿಪ್ರಾಯಗಳಿಂದಾಗಿ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.
ಮಗಳನ್ನು ನೋಡಲು ಹಾಗೂ ಮಾತನಾಡಲು ಅವಕಾಶ ನೀಡಲಾಗುತ್ತಿರಲಿಲ್ಲ ಎಂಬ ಅಸಮಾಧಾನದಿಂದ ಹರ್ಷವರ್ಧನ್ ಈ ಕೃತ್ಯಕ್ಕೆ ಮುಂದಾಗಿದ್ದಾನೆ ಎನ್ನಲಾಗಿದೆ. ಶೂಟಿಂಗ್ ನೆಪದಲ್ಲಿ 20 ಸಾವಿರ ರೂ. ಅಡ್ವಾನ್ಸ್ ನೀಡಿ ಚೈತ್ರಾ ಅವರನ್ನು ಮೈಸೂರಿಗೆ ಕರೆಸಿಕೊಂಡು, ಬಳಿಕ ಅಪಹರಣ ಮಾಡಿ ತಾಯಿಗೆ ಬೆದರಿಕೆ ಕರೆ ಮಾಡಿದ್ದಾನೆ.
ದೂರು ದಾಖಲಾದ ಬಳಿಕ ಹರ್ಷವರ್ಧನ್ ಸ್ವತಃ ಚೈತ್ರಾ ಅವರನ್ನು ಕುಟುಂಬದವರಿಗೆ ಒಪ್ಪಿಸಿದ್ದಾನೆ. ನಂತರ ಪೊಲೀಸರು ಇಬ್ಬರನ್ನೂ ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಇದು ಕೌಟುಂಬಿಕ ವಿಚಾರವಾಗಿದ್ದು, ತಾವೇ ಬಗೆಹರಿಸಿಕೊಳ್ಳುವುದಾಗಿ ಚೈತ್ರಾ ಹಾಗೂ ಹರ್ಷವರ್ಧನ್ ಪೊಲೀಸರ ಮುಂದೆ ತಿಳಿಸಿದ್ದಾರೆ.
ಪೊಲೀಸರು ಮುಂದಿನ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಹರ್ಷವರ್ಧನ್ ಅವರನ್ನು ಬಿಟ್ಟು ಕಳಿಸಿದ್ದಾರೆ. ಮಗಳ ಮುಖ ನೋಡಲು ಸಹ ಅವಕಾಶ ನೀಡಲಾಗುತ್ತಿರಲಿಲ್ಲ, ಪದೇ ಪದೇ ಬೇಡಿಕೊಂಡರೂ ಮಗುವನ್ನು ತೋರಿಸಿರಲಿಲ್ಲ ಎಂಬ ನೋವಿನಿಂದ ಈ ಕೆಲಸ ಮಾಡಿದ್ದೇನೆ ಎಂದು ಹರ್ಷವರ್ಧನ್ ಪೊಲೀಸರ ಎದುರು ಹೇಳಿಕೆ ನೀಡಿದ್ದಾನೆ.






