ಉತ್ತರ ಕರ್ನಾಟಕದ ಜಾನಪದ ಗಾಯಕ ಮ್ಯೂಸಿಕ್ ಮೈಲಾರಿ ವಿರುದ್ಧ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ ಪೋಕ್ಸೊ ಪ್ರಕರಣ ದಾಖಲಾಗಿದೆ. ಕಾರ್ಯಕ್ರಮವೊಂದರಲ್ಲಿ ನೃತ್ಯ ಮಾಡಲು ಕರೆದುಕೊಂಡು ಹೋಗಿ ಬಾಲಕಿಯ ಮೇಲೆ ಲೈಂಗಿಕ ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಅಕ್ಟೋಬರ್ 24ರಂದು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ ನಡೆದ ಕಾರ್ಯಕ್ರಮಕ್ಕೆ ಮ್ಯೂಸಿಕ್ ಮೈಲಾರಿ, ಅಥಣಿ ಶಂಕರ ಹಾಗೂ ದಾನವಿ ಸಿಂಗರ್ ಅವರು ಅಪ್ರಾಪ್ತ ಬಾಲಕಿಯನ್ನು ಡ್ಯಾನ್ಸ್ ಮಾಡಲು ಕರೆದುಕೊಂಡು ಹೋಗಿದ್ದರೆಂದು ಆರೋಪಿಸಲಾಗಿದೆ. ಈ ಘಟನೆ ಮಹಾಲಿಂಗಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.
ಬೆಳಗಾವಿ ಜಿಲ್ಲೆಯ ಗ್ರಾಮವೊಂದರಲ್ಲಿ ಹನುಮಂತ ದೇವರ ಓಕುಳಿ ಅಂಗವಾಗಿ ಆಯೋಜಿಸಿದ್ದ ಆರ್ಕೆಸ್ಟ್ರಾ ಕಾರ್ಯಕ್ರಮಕ್ಕೆ ಮ್ಯೂಸಿಕ್ ಮೈಲಾರಿ ಹಾಡಲು ಆಗಮಿಸಿದ್ದರು. ಇದೇ ಆರ್ಕೆಸ್ಟ್ರಾದಲ್ಲಿ ಅಪ್ರಾಪ್ತ ಬಾಲಕಿ ನೃತ್ಯ ಪ್ರದರ್ಶನ ನೀಡುತ್ತಿದ್ದಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕಾರ್ಯಕ್ರಮದ ವೇಳೆ ಬಾಲಕಿಯನ್ನು ಲಾಡ್ಜ್ಗೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ಆಕೆ ಪೊಲೀಸರಿಗೆ ದೂರು ನೀಡಿದ್ದಾಳೆ. ಅಲ್ಲದೆ, ಅತ್ಯಾಚಾರ ಎಸಗಿ ಅದರ ವಿಡಿಯೋವನ್ನು ಮಾಡಲಾಗಿದೆ ಎಂದು ಆಕೆ ಗಂಭೀರ ಆರೋಪ ಮಾಡಿದ್ದಾಳೆ.
ಈ ಪ್ರಕರಣದಲ್ಲಿ ಮ್ಯೂಸಿಕ್ ಮೈಲಾರಿ ಸೇರಿದಂತೆ ಒಟ್ಟು ಏಳು ಮಂದಿ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ. ಡಿಸೆಂಬರ್ 14ರಂದು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ನಂತರ ಡಿಸೆಂಬರ್ 15ರಂದು ಪ್ರಕರಣವನ್ನು ಮಹಾಲಿಂಗಪುರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಪೊಲೀಸ್ ಠಾಣೆಯಲ್ಲಿ ಮ್ಯೂಸಿಕ್ ಮೈಲಾರಿ ಸೇರಿ ಏಳು ಜನರ ವಿರುದ್ಧ ಪೋಕ್ಸೊ ಕಾಯ್ದೆಯಡಿ ಎಫ್ಐಆರ್ ದಾಖಲಾಗಿದೆ. ಪ್ರಕರಣ ಸಂಬಂಧ ತನಿಖೆ ಮುಂದುವರಿದಿದೆ.
ಮ್ಯೂಸಿಕ್ ಮೈಲಾರಿ ಹಾಡಿದ್ದ ಹಾಡುಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದವು. ಅದರಲ್ಲೂ ‘ಬಾಗಲಕೋಟೆ ಬಸ್ ಸ್ಟ್ಯಾಂಡ್ನಾಗ’ ಎಂಬ ಹಾಡು ಅಪಾರ ಜನಪ್ರಿಯತೆ ಗಳಿಸಿತ್ತು.
ಆರ್ಕೆಸ್ಟ್ರಾಕ್ಕೆ ನೃತ್ಯಕ್ಕೆ ಬಂದಿದ್ದ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: ಉತ್ತರ ಕರ್ನಾಟಕ ಜಾನಪದ ಗಾಯಕ ಮೈಲಾರಿ ವಿರುದ್ಧ ಪೋಕ್ಸೊ
By krutika naik
On: December 16, 2025 1:51 PM
---Advertisement---






