ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದ ಪ್ರೌಢಶಾಲೆಯ ಪ್ರಾಂಶುಪಾಲ ವಿದ್ಯಾರ್ಥಿನಿಯರ ಮೇಲೆ ಅಸಭ್ಯ ವರ್ತನೆ ತೋರಿದ್ದಾನೆ ಎಂಬ ಆರೋಪದ ಪರಿಣಾಮ, ಆತನ ಮೇಲೆ ಪೋಷಕರು ಹಾಗೂ ಸ್ಥಳೀಯರು ಕೋಪ ತೋರಿದ ಘಟನೆ ನಡೆದಿದೆ. ನಂತರ ಪೊಲೀಸರು ಮಧ್ಯಪ್ರವೇಶಿಸಿ ಆರೋಪಿಯನ್ನು ತಮ್ಮ ವಶಕ್ಕೆ ಪಡೆದಿದ್ದಾರೆ.
ಬೆಳಗುಂದಿ ಹೆಣ್ಣುಮಕ್ಕಳ ಹೈಸ್ಕೂಲ್ನಲ್ಲಿ ಕರ್ತವ್ಯನಿರ್ವಹಿಸುತ್ತಿದ್ದ ಕಲ್ಲಪ್ಪ ಬೆಳಗಾಂವಕರ್ ಎಂಬ ಪ್ರಾಂಶುಪಾಲ ಎಷ್ಟೋ ದಿನಗಳಿಂದ ವಿದ್ಯಾರ್ಥಿನಿಯರೊಂದಿಗೆ ಅನೈತಿಕವಾಗಿ ವರ್ತಿಸುತ್ತಿದ್ದಾನೆ ಎನ್ನುವ ಮಾಹಿತಿ ಗ್ರಾಮದಲ್ಲಿ ಹರಡಿತ್ತು. ವಿದ್ಯಾರ್ಥಿನಿಯರು ಈ ವಿಷಯವನ್ನು ತಮ್ಮ ಮನೆಯವರ ಗಮನಕ್ಕೆ ತಂದ ನಂತರ ಪರಿಸ್ಥಿತಿ ಗಂಭೀರ ರೂಪ ಪಡೆದಿದೆ.
ಪೋಷಕರು ಹಾಗೂ ಕೆಲವು ಗ್ರಾಮಸ್ಥರು ಶುಕ್ರವಾರ (ಡಿ.12) ಶಾಲೆಯೊಳಗೆ ನುಗ್ಗಿ, ಆರೋಪಿಯನ್ನು ಹೊರಗೆಳೆದು ಗಂಭೀರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಆ ವೇಳೆಯಲ್ಲಿ ಶಾಲೆಯ ಆವರಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ವಿದ್ಯಾರ್ಥಿನಿಯರೂ ಪ್ರಾಂಶುಪಾಲನ ವರ್ತನೆಗೆ ವಿರೋಧ ವ್ಯಕ್ತಪಡಿಸಿದ್ದರು.
ಘಟನೆಯ ಸುದ್ದಿ ತಿಳಿದ ತಕ್ಷಣ ಬೆಳಗಾವಿ ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಬಂದು, ಜನಸಮೂಹದಿಂದ ಪ್ರಾಂಶುಪಾಲನನ್ನು ಬಿಡಿಸಿ ಸುರಕ್ಷಿತವಾಗಿ ಠಾಣೆಗೆ ಕರೆದೊಯ್ದಿದ್ದಾರೆ. ಗ್ರಾಮಸ್ಥರು ಮತ್ತು ಪೋಷಕರು ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.
ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿ, ವಿದ್ಯಾರ್ಥಿನಿಯರು ಹಾಗೂ ಪೋಷಕರ ಹೇಳಿಕೆ ಆಧರಿಸಿ ತನಿಖೆ ಮುಂದುವರೆಸುತ್ತಿದ್ದಾರೆ. ಶಾಲೆಯ ಮುಖ್ಯಸ್ಥನಿಂದಲೇ ಇಂತಹ ಅನಾಚಾರ ನಡೆದಿದೆ ಎಂಬುದು ಸ್ಥಳೀಯ ಸಮುದಾಯದಲ್ಲಿ ತೀವ್ರ ಆಕ್ರೋಶ ಉಂಟುಮಾಡಿದೆ.
ಬೆಳಗಾವಿ: ವಿದ್ಯಾರ್ಥಿನಿಯರೊಂದಿಗೆ ಅಸಭ್ಯ ವರ್ತನೆ, ಬೆಳಗುಂದಿ ಪ್ರಾಂಶುಪಾಲನಿಗೆ ಪೋಷಕರ ಧರ್ಮದೇಟು…
By krutika naik
On: December 13, 2025 5:32 AM
---Advertisement---






