ಸಾಮಾನ್ಯವಾಗಿ ಮನರಂಜನೆಗಾಗಿ ಅಥವಾ ಸಾಲ ತೀರಿಸಲು ಕಳ್ಳತನ, ಸುಲಿಗೆ ಪ್ರಕರಣಗಳು ನಡೆಯುವುದು ಕೇಳಿದ್ದೇವೆ. ಆದರೆ ಇಲ್ಲಿ ನಡೆದಿರುವ ಘಟನೆ ವಿಭಿನ್ನ. ಗೆಳತಿಯೊಂದಿಗೆ ಲಿವಿಂಗ್ ಟುಗೆದರ್ ಜೀವನ ನಡೆಸಲು ಹಣ ಬೇಕೆಂಬ ಆಸೆಗಾಗಿ ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಮಹಿಳೆಯರನ್ನೇ ಗುರಿ ಮಾಡಿ ಸುಲಿಗೆ ಮಾಡುತ್ತಿದ್ದ ಯುವಕನ ಕೃತ್ಯ ಬಹಿರಂಗವಾಗಿದೆ. ಈ ಕುಖ್ಯಾತ ಸುಲಿಗೆಕೋರನ ಕಾರ್ಯಪದ್ದತಿಯನ್ನು ಪೊಲೀಸರು ಬಯಲಿಗೆಳೆದಿದ್ದಾರೆ.
ಗೆಳತಿಯ ಇಷ್ಟ-ಆಸೆಗಳನ್ನು ಪೂರೈಸಲು ಹಾಗೂ ಲಿವಿಂಗ್ ರಿಲೇಶನ್‌ಶಿಪ್‌ನ ಖರ್ಚುಗಳನ್ನು ನಿಭಾಯಿಸಲು ಕಳ್ಳತನದ ದಾರಿಗೆ ಇಳಿದಿದ್ದ ವ್ಯಕ್ತಿ ಮತ್ತು ಅವನಿಗೆ ಸಹಕಾರ ನೀಡುತ್ತಿದ್ದ ಮತ್ತೊಬ್ಬರು ಪೊಲೀಸರ ಬಲೆಗೆ ಸಿಕ್ಕಿದ್ದಾರೆ. ಕಲಬುರಗಿ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಕಲ್ಲಪ್ಪ ಅಲಿಯಾಸ್ ಸಂಜು ಸೋಮಣ್ಣ (24) ಹಾಗೂ ಅವನಿಗೆ ಸಹಾಯ ಮಾಡುತ್ತಿದ್ದ ಸಂತೋಷ್ ಎಂಬ ವ್ಯಕ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನವೆಂಬರ್ 22ರಂದು ಓಂ ನಗರ ಗೇಟ್ ಬಳಿ ಕೂಲಿ ಕೆಲಸಕ್ಕೆಂದು ಹೋಗುತ್ತಿದ್ದ ದಾರುನಾಯಕ್ ತಾಂಡಾ ನಿವಾಸಿ ಸುನೀತಾ ರಾಠೋಡ್ ಅವರನ್ನು, ಕಟ್ಟಡ ಕಾಮಗಾರಿ ಇದೆ ಎಂಬ ಮಿಥ್ಯಾ ಹೇಳಿ ವಾಜಪೇಯಿ ಬಡಾವಣೆಯ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಹಲ್ಲೆ ಮಾಡಿ ಬೆದರಿಸಿ, ಕೊರಳಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಕಸಿದು ಪರಾರಿಯಾಗಿದ್ದರು.
ಪ್ರಕರಣ ದಾಖಲಾಗುತ್ತಿದ್ದಂತೆ, ಕಲಬುರಗಿ ವಿವಿ ಪೊಲೀಸರು ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿ, ಸುನೀತಾಳನ್ನು ಕರೆದುಕೊಂಡು ಹೋಗುತ್ತಿರುವ ಇಬ್ಬರ ಚಿತ್ರಣವನ್ನು ಗುರುತಿಸಿದರು. ಇದರ ಆಧಾರದ ಮೇಲೆ ಇಬ್ಬರನ್ನೂ ಬಂಧಿಸಲಾಯಿತು. ಅವರಿಂದ 7.62 ಲಕ್ಷ ಮೌಲ್ಯದ 61 ಗ್ರಾಂ ಚಿನ್ನಾಭರಣ ಮತ್ತು 600 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಲ್ಲಪ್ಪ ಅಲಿಯಾಸ್ ಸಂಜು ಕೂಲಿ ಕೆಲಸ ಮಾಡುತ್ತಿದ್ದರೂ, ಒಬ್ಬ ಮಹಿಳೆಯೊಂದಿಗೆ ಲಿವಿಂಗ್ ರಿಲೇಶನ್‌ಶಿಪ್‌ನಲ್ಲಿ ಇದ್ದದ್ದು ಬೆಳಕಿಗೆ ಬಂದಿದೆ. ಆಕೆಯೊಂದಿಗೆ ಮೋಜು–ಮಸ್ತಿ ಮಾಡಲು ಹಣ ಬೇಕಾದಾಗ ಪಿಕ್‌ಪಾಕೆಟ್ ಮತ್ತು ಸುಲಿಗೆ ದಂಧೆ ಮಾಡುತ್ತಿದ್ದನೆಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಸುಲಿಗೆ ಮಾಡುತ್ತಿದ್ದನೆಂಬುದೂ ಸ್ಪಷ್ಟವಾಗಿದೆ.
ಮೈ ಮುರಿದು ದುಡಿದು ಬದುಕಬಹುದಾದಾಗ, ಮಹಿಳೆಯೊಂದಿಗೆ ಐಶಾರಾಮಿ ಜೀವನಕ್ಕಾಗಿ ಸುಲಿಗೆ ದಾರಿ ಹಿಡಿದ ಕಲ್ಲಪ್ಪ ಇದೀಗ ಜೈಲುಪಾಲಾಗಿದ್ದಾನೆ. ಆದರೆ ಆತ ಲಿವಿಂಗ್ ಟುಗೆದರ್‌ನಲ್ಲಿದ್ದ ಮಹಿಳೆ ಮನೆಯಲ್ಲೇ ಆರಾಮವಾಗಿ ಜೀವನ ಮುಂದುವರಿಸುತ್ತಿದ್ದಾಳೆ.






