ಉತ್ತರ ಪ್ರದೇಶದ ದೇವರಿಯಾ ಗ್ರಾಮದಲ್ಲಿ ಮದುವೆಯಾಗಿ ಕೇವಲ ಐದು ಗಂಟೆಗಳಲ್ಲೇ ವಿಚ್ಛೇದನ ಅರ್ಜಿ ಸಲ್ಲಿಸಿದ ವಿಚಿತ್ರ ಘಟನೆ ನಡೆದಿದೆ. ಜೀವನದ ಅತ್ಯಂತ ಸಂತೋಷದಾಯಕ ದಿನವಾಗಬೇಕಿದ್ದ ಮದುವೆ, ಈ ಜೋಡಿಗೆ ದುಃಸ್ವಪ್ನವಾಗಿ ಪರಿಣಮಿಸಿತು.
ಗುರುಹಿರಿಯರ ಸಮ್ಮುಖದಲ್ಲಿ ವಿಶಾಲ್ ಮತ್ತು ಪೂಜಾ ಸಾಂಪ್ರದಾಯಿಕವಾಗಿ ಹಸೆಮಣೆ ಏರಿದರು. ಮದುವೆಯೂ ಅದ್ದೂರಿಯಾಗಿ ಜರುಗಿತು. ಶಾಸ್ತ್ರಸಮ್ಮತವಾಗಿ ವಧುವನ್ನು ಗಂಡನ ಮನೆಗೆ ಕಳುಹಿಸಲಾಯಿತು. ಆದರೆ ಅಲ್ಲಿ ತಲುಪಿದ ಕೆಲವು ಕ್ಷಣಗಳಲ್ಲೇ ಪರಿಸ್ಥಿತಿ ತಿರುವು ತಳೆದಿತು. ಮದುವೆಯಾಗಿದ 20 ನಿಮಿಷಗಳಲ್ಲೇ ಪೂಜಾ ಕೋಣೆಯಿಂದ ಹೊರಬಂದು, ತಾನು ತವರು ಮನೆಗೆ ಹಿಂದಿರುಗುತ್ತೇನೆಂದು ಪಟ್ಟು ಹಿಡಿದಳು.
ಮೊದಲಿಗೆ ಮನೆಯವರು ಇದನ್ನು ತಮಾಷೆಯೆಂದು ಭಾವಿಸಿದರು. ಆದರೆ ಪೂಜಾ ತನ್ನ ಹೆತ್ತವರಿಗೆ ಕರೆ ಮಾಡಿ, ಇಲ್ಲಿ ಉಳಿಯುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದಳು. ಆಕೆಯ ಈ ನಿರ್ಧಾರದ ಹಿಂದಿನ ಕಾರಣ ಇನ್ನೂ ಗೊತ್ತಾಗಿಲ್ಲ. ಅವಳ ಮನಸ್ಸಿನಲ್ಲಿ ಏನಾಯಿತು ಎಂಬುದರ ಬಗ್ಗೆ ಯಾವುದೇ ಮಾಹಿತಿಯೂ ಲಭ್ಯವಾಗಿಲ್ಲ.
ವಿಶಾಲ್ ಕುಟುಂಬವು ಈ ಘಟನೆ ಬಗ್ಗೆ ಪೂಜಾಳ ಮನೆಯವರಿಗೆ ತಿಳಿಸಿತು. ಇಬ್ಬರೂ ಕುಟುಂಬಗಳು ಆಕೆಯನ್ನು ಮನವೊಲಿಸಲು ಪ್ರಯತ್ನಿಸಿದರೂ, ಪೂಜಾ ತನ್ನ ನಿರ್ಧಾರವನ್ನು ಬದಲಾಯಿಸಲಿಲ್ಲ. ಕಾರಣ ಹೇಳಲು ಸಹ ಆಕೆ ಮುಂದೆ ಬಂದಿಲ್ಲ.
ಮುಂದಿನ ದಿನ ಪಂಚಾಯತ್ ಸಭೆ ಕರೆದಲಾಗಿದ್ದು, ಸುಮಾರು ಐದು ಗಂಟೆಗಳ ಚರ್ಚೆಯ ಬಳಿಕ ಪರಸ್ಪರ ಒಪ್ಪಿಗೆಯೊಂದಿಗೆ ಮದುವೆಯನ್ನು ಕೊನೆಗೊಳಿಸಲು ನಿರ್ಧರಿಸಿದರು. ಮದುವೆಗೆ ನೀಡಿದ್ದ ಉಡುಗೊರೆಗಳನ್ನು ಪರಸ್ಪರ ಹಿಂತಿರುಗಿಸಲಾಯಿತು. ಬಳಿಕ ಪೂಜಾ ತನ್ನ ಕುಟುಂಬದೊಂದಿಗೆ ವಾಪಸ್ಸಾಗಿದ್ದಳು.
ಮಾತುಮಾತಿನಲ್ಲಿ ವಿಶಾಲ್ ಹೇಳುವಂತೆ, “ಮದುವೆಗೆ ಮುಂಚೆ ಪೂಜಾಗೆ ಈ ಸಂಬಂಧದ ಬಗ್ಗೆ ಆಸಕ್ತಿ ಇರಲಿಲ್ಲ. ನನ್ನೊಂದಿಗೆ ಸರಿಯಾಗಿ ಮಾತನಾಡಲು ಸಹ ಆಕೆ ತಯಾರಿರಲಿಲ್ಲ. ಈಗ ಮದುವೆಯ ಕೆಲ ಗಂಟೆಗಳಲ್ಲಿ ಮನೆ ಬಿಟ್ಟುಹೋಗಿದ್ದು, ಎರಡೂ ಕುಟುಂಬಗಳಿಗೂ ದೊಡ್ಡ ಮುಜುಗರವಾಗಿಸಿದೆ” ಎಂದು ಹೇಳಿದ್ದಾರೆ.






