ಸ್ಯಾಂಡಲ್‌ವುಡ್ ಪ್ರಮುಖ ನಟ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಇತ್ತೀಚೆಗೆ ಪೊಲೀಸ್ ಠಾಣೆಗೆ ಭೇಟಿ ನೀಡಿರುವ ವಿಚಾರ ಚಿತ್ರರಂಗದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಕೆಲವೇ ದಿನಗಳ ಹಿಂದೆ ಅವರು ನಿರ್ಮಾಪಕಿಯಾಗಿ ‘ಕೊತ್ತಲವಾಡಿ’ ಚಿತ್ರವನ್ನು ನಿರ್ಮಿಸಿ ಕನ್ನಡ ಚಿತ್ರರಂಗಕ್ಕೆ ಅಧಿಕೃತ ಪ್ರವೇಶ ಮಾಡಿದ್ದರು. ಇದೇ ವೇಳೆ ಅವರ ಪುತ್ರ ಯಶ್ ‘ಟಾಕ್ಸಿಕ್’ ಮತ್ತು ‘ರಾಮಾಯಣ’ ಸಿನಿಮಾಗಳ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಈ ನಡುವೆ ಪುಷ್ಪ ಅವರು ನೇರವಾಗಿ ಠಾಣೆಗೆ ತೆರಳಿ ದೂರು ಸಲ್ಲಿಸಿರುವುದು ಹೊಸ ಕುತೂಹಲ ಮೂಡಿಸಿದೆ.
‘ಕೊತ್ತಲವಾಡಿ’ ನಂತರ ಪುಷ್ಪ ಅವರು ಇನ್ನೊಂದು ಹೊಸ ಸಿನಿಮಾವನ್ನು ಘೋಷಿಸಿದ್ದರು. ಆದರೆ ಅದರ ಮಧ್ಯೆ ಅವರಿಗೆ ಜೀವ ಬೆದರಿಕೆ ಬಂದಿರುವ ಆರೋಪ ಹೊರಬಿದ್ದಿದೆ. ಇದರಿಂದಾಗಿ ಅವರು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಎಫ್‌ಐಆರ್ ದಾಖಲಿಸಿದ್ದಾರೆ. ಅವರಿಗೆ ಜೀವ ಬೆದರಿಕೆ ಹಾಕಿದ್ದು ಯಾರು? ಯಾವ ಕಾರಣಕ್ಕಾಗಿ? ಎಂಬ ಪ್ರಶ್ನೆಗಳು ಇದೀಗ ಎಲ್ಲೆಡೆ ಕೇಳಿಬರುತ್ತಿವೆ.
ಚಿತ್ರರಂಗದ ಪ್ರಚಾರಕ ಹರೀಶ್ ಅರಸು ಹಾಗೂ ಅವರ ಸಹಚರರು ದೊಡ್ಡ ಮಟ್ಟದ ವಂಚನೆ, ಹಣದ ದುರುಪಯೋಗ ಮತ್ತು ಜೀವ ಬೆದರಿಕೆ ಮಾಡಿದರೆಂಬ ಆರೋಪದೊಂದಿಗೆ ಅವರು ದೂರು ನೀಡಿದ್ದಾರೆ. ಹರೀಶ್ ಅರಸು, ಮನು, ನಿತಿನ್, ಮಹೇಶ್ ಗುರು ಮತ್ತು ಸ್ವರ್ಣಲತಾ ಎಂಬವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
‘ಕೊತ್ತಲವಾಡಿ’ ಚಿತ್ರದ ಪ್ರಚಾರಕ್ಕಾಗಿ ಪುಷ್ಪ ಅವರು ಹರೀಶ್‌ಗೆ ಹಣ ಹಸ್ತಾಂತರಿಸಿದ್ದರು. ಪ್ರಚಾರಕ್ಕಾಗಿ ಒಟ್ಟು 64 ಲಕ್ಷ ರೂಪಾಯಿ ಪಡೆದಿದ್ದರೂ, ಅದರಲ್ಲಿ 4 ಲಕ್ಷ ರೂಪಾಯಿಯನ್ನು ಜಾಹೀರಾತಿಗಾಗಿ ನೀಡಲಾಗಿದ್ದರೂ ಕೂಡ ಸರಿಯಾದ ರೀತಿಯಲ್ಲಿ ಪ್ರಚಾರ ಮಾಡಲಿಲ್ಲ ಎಂದು ಪುಷ್ಪ ದೂರಿನಲ್ಲಿ ತಿಳಿಸಿದ್ದಾರೆ. ಪ್ರಚಾರದ ಕೊರತೆಯಿಂದಾಗಿ ನಟರೇ ತಮ್ಮ ಖರ್ಚಿನಲ್ಲಿ ಜಾಹೀರಾತು ಮಾಡಬೇಕಾದ ಪರಿಸ್ಥಿತಿ ಉಂಟಾಯಿತು ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಪ್ರಶ್ನಿಸಿದಾಗ ಹರೀಶ್ ಅವರು ಬೆದರಿಕೆ ಹಾಕಿದ್ದು ಮಾತ್ರವಲ್ಲದೆ, ಹಣವನ್ನು ಮರುಪಾವತಿ ಮಾಡಲು ಕೂಡ ಹಿಂಜರಿದರೆಂದು ಪುಷ್ಪ ಆರೋಪಿಸಿದ್ದಾರೆ. ಅಲ್ಲದೆ ಈ ಸಿನಿಮಾವನ್ನು ಅವಹೇಳನಗೊಳಿಸುವ ರೀತಿಯಲ್ಲಿ ನೆಗೆಟಿವ್ ಪ್ರಚಾರ ಕೂಡ ಮಾಡಿದ್ದಾರೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟ ಪೋಸ್ಟ್‌ಗಳನ್ನು ಹಾಕುವೆ, ಮನೆಗೆ ಬಂದು ಗಲಾಟೆ ಮಾಡುವೆ ಎಂದು ಕೂಡ ಹರೀಶ್ ಬೆದರಿಕೆ ಹಾಕಿದ್ದರೆಂಬುದು ಪುಷ್ಪ ಅವರ ಹೇಳಿಕೆ.
ಹರೀಶ್ ಅವರ ಬೆದರಿಕೆ ನಂತರ ಕೆಲವು ಮಂದಿ ಆನ್‌ಲೈನ್‌ನಲ್ಲಿ ಪುಷ್ಪ ಬಗ್ಗೆ ಅವಹೇಳನಕಾರಿ ಕಾಮೆಂಟ್‌ಗಳು ಪೋಸ್ಟ್ ಮಾಡಿದ್ದು, ಇದರಿಂದ ತಮ್ಮ ಮಾನಹಾನಿ ಉಂಟಾಗಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಜೊತೆಗೆ ಅಪರಿಚಿತರಿಂದ ಜೀವ ಬೆದರಿಕೆ ಕರೆಗಳು ಬಂದಿದ್ದು, ವಂಚನೆ, ಬೆದರಿಕೆ, ಮಾನಹಾನಿ ಮತ್ತು ಕ್ರಿಮಿನಲ್ ಪಿತೂರಿಗಾಗಿ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದ್ದಾರೆ.






