ಇಂದಿನ ಕಾಲದಲ್ಲಿ ಪಿಜ್ಜಾ–ಬರ್ಗರ್‌ಗಳಂತಹ ಜಂಕ್ ಫುಡ್ ಹೊಳಪಿನ ನಡುವೆ, ಹಳ್ಳಿನ ರಾಗಿ ಮುದ್ದೆ ಮತ್ತು ನಾಟಿ ಕೋಳಿ ಸಾರು ತನ್ನದೇ ಆದ ಸ್ಥಾನ ಕಳೆದುಕೊಂಡಿಲ್ಲ. ಇದೇ ವಿಶಿಷ್ಟ ರುಚಿಯ ಕಾಂಬಿನೇಶನ್ ಇಂದು ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಅಮೋಘ ಪರಿಮಳ ಹರಡಿತ್ತು. “ಎಚ್‌ಎಸ್‌ಆರ್ ಲೇಔಟ್‌ಗೆ ರಾಗಿ ಮುದ್ದೆ–ನಾಟಿ ಕೂಳಿ ಸಾರುಗೂ ಸಂಬಂಧವೇನು?” ಎಂದು ಅಚ್ಚರಿ ಪಡ್ತೀರಾ? ಈ ಕಥೆ ಓದಿದ್ರೆ ಸ್ಪಷ್ಟವಾಗುತ್ತದೆ.
ಎಚ್‌ಎಸ್‌ಆರ್ ಬಡಾವಣೆಯಲ್ಲಿ ನಾಟಿ ಕೋಳಿ ಸಾರಿನ ಸುಗಂಧದೊಂದಿಗೆ ಬಿಸಿ ಬಿಸಿ ರಾಗಿ ಮುದ್ದೆಗಳನ್ನು ಗುಳುಂ ಎಂದು ನುಂಗುತ್ತಿದ್ದ ಸ್ಪರ್ಧಿಗಳು, ಅವರನ್ನ ಉತ್ತೇಜಿಸುತ್ತಿದ್ದ ಜನಸ್ತೋಮ ಎಲ್ಲವೂ ಹಬ್ಬದ ವಾತಾವರಣ ಸೃಷ್ಟಿಸಿತ್ತು. ಎಚ್‌ಎಸ್‌ಆರ್ ವಕೀಲರ ಒಕ್ಕೂಟವು ನಾಡಗೀತೆಗೆ 100 ವರ್ಷದ ಸಂಭ್ರಮದ ಅಂಗವಾಗಿ ಈ ಗ್ರಾಮೀಣ ಥೀಮ್‌ನ ಮುದ್ದೆ–ಸಾರು ತಿನ್ನುವ ಸ್ಪರ್ಧೆಯನ್ನು ಆಯೋಜಿಸಿತ್ತು.
ಪುರುಷ ವಿಭಾಗದಲ್ಲಿ 68 ಜನ, ಮಹಿಳಾ ವಿಭಾಗದಲ್ಲಿ 25 ಜನ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. 45 ನಿಮಿಷಗಳಲ್ಲಿ ಹೆಚ್ಚು ಮುದ್ದೆ ತಿಂದವರಿಗೆ ಬಹುಮಾನ ಘೋಷಿಸಲಾಗಿತ್ತು. ಅಂತಿಮವಾಗಿ ವೈಲ್ಡ್‌ಫೀಲ್ಡ್ ನಲ್ಲೂರಹಳ್ಳಿ ನಿವಾಸಿಗಳಾದ ಅಜಯ್ ಕುಮಾರ್ ಮತ್ತು ಸೌಮ್ಯ ವಿಜೇತರಾದರು.
12 ಮುದ್ದೆ ‘ಸವಿದ’ ಅಜಯ್‌ಗೆ ಟಗರು!
ಸಪ್ಪೆ ಸಪ್ಪೆ ವೀಕೆಂಡ್‌ನ ಸಂಭ್ರಮಕ್ಕೆ ನಾಟಿ ಕೂಳಿ ಸಾರು–ರಾಗಿ ಮುದ್ದೆ ಸ್ಪರ್ಧೆ ವಿಶೇಷ ರಸಭರಿತ ಸುವಾಸನೆ ನೀಡಿತ್ತು. ಮಂಡ್ಯ, ಹಾಸನ, ಕನಕಪುರ, ಚಿತ್ರದುರ್ಗ, ಮೈಸೂರು, ದೊಡ್ಡಬಳ್ಳಾಪುರ, ಚನ್ನಪಟ್ಟಣ, ಆನೇಕಲ್ ಸೇರಿದಂತೆ ವಿವಿಧ ಜಿಲ್ಲೆಗಳಿಂದ 100ಕ್ಕೂ ಹೆಚ್ಚು ಮಂದಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪುರುಷ ವಿಭಾಗದಲ್ಲಿ ಅಜಯ್ ಕುಮಾರ್ 12 ಮುದ್ದೆ ತಿನ್ನುವ ಮೂಲಕ ಪ್ರಥಮ ಸ್ಥಾನ ಪಡೆದು ‘ಟಗರು’ ಬಹುಮಾನ ಗೆದ್ದರು. ಮಹಿಳಾ ವಿಭಾಗದಲ್ಲಿ ಸೌಮ್ಯ 10 ಮುದ್ದೆ ತಿನ್ನಿ 32 ಇಂಚಿನ ಟಿವಿ, ₹5000 ನಗದು ಹಾಗೂ ಆಕರ್ಷಕ ಸೀರೆ ಪಡೆದು ಹರ್ಷೋದ್ಗಾರ ವ್ಯಕ್ತಪಡಿಸಿದರು.
ಅಕ್ಕ–ತಮ್ಮ ಇಬ್ಬರಿಗೂ ಗೆಲುವಿನ ಚಪ್ಪಾಳೆ!
“ಕಳೆದ ವರ್ಷ ನನ್ನ ಸಂಬಂಧಿ ಈ ಸ್ಪರ್ಧೆಯ ಬಗ್ಗೆ ಹೇಳಿದ್ರು. ಆಗ 9 ಮುದ್ದೆ ತಿಂದು ಮೊದಲ ಬಹುಮಾನ ಗೆದ್ದಿದ್ದೆ. ಈ ಬಾರಿ ಕೂಡ ಅವರ ಸೂಚನೆಯಿಂದ ಸ್ಪರ್ಧೆಗೆ ಬಂದಿದ್ದೆ. ಮನೆಯಲ್ಲಿದ್ದಾಗ ಅರ್ಧ ಮುದ್ದೆ ತಿನ್ನೋದಲ್ಲೇ ಕಷ್ಟ, ಆದರೆ ಇಲ್ಲಿ ಅದ್ಭುತ ರೀತಿಯಲ್ಲಿ ನಾನು ಮತ್ತು ನನ್ನ ತಮ್ಮ ಇಬ್ಬರೂ ಮೊದಲ ಬಹುಮಾನ ಗೆದ್ದಿದ್ದೇವೆ,” ಎಂದು ಸೌಮ್ಯ ಖುಷಿ ವ್ಯಕ್ತಪಡಿಸಿದರು. “ರಾಗಿ ಮುದ್ದೆ ತಿನ್ನೋದನ್ನ ಕೆಲವರು ಅಲ್ಪವಾಗಿ ಕಾಣುತ್ತಾರೆ, ಆದರೆ ಇದು ಸುಲಭ ಕೆಲಸವಲ್ಲ. ಆಯೋಜಕರು ತುಂಬಾ ಸುವ್ಯವಸ್ಥಿತವಾಗಿ ಸ್ಪರ್ಧೆ ನಡೆಸಿದ್ದರು,” ಎಂದೂ ಅವರು ತಿಳಿಸಿದರು.
ಒಟ್ಟಾರೆ ಹೆಲ್ತಿಗೆ ಹಿತವಾದ ಗ್ರಾಮೀಣ ರುಚಿಗೆ ಜನರಿಂದ ಭಾರೀ ಸ್ಪಂದನೆ
ಜಂಕ್ ಫುಡ್ ಆರೋಗ್ಯಕ್ಕೆ ಸೂಕ್ತವಲ್ಲ ಎಂಬ ಸಂದೇಶವನ್ನು ಜನತೆಗೆ ತಲುಪಿಸಲು ಗ್ರಾಮೀಣ ಸೊಗಡಿನ ಈ ಸ್ಪರ್ಧೆ ಉತ್ತಮ ಮಾಧ್ಯಮವಾಯಿತು. ರಾಗಿ ಮುದ್ದೆ ಮತ್ತು ನಾಟಿ ಕೂಳಿ ಸಾರುಗಳ ಮಹತ್ವವನ್ನು ಪುನಃ ನೆನಪಿಸುವ ಈ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತು, ಸ್ಪರ್ಧಿಗಳು ಮಾತ್ರವಲ್ಲ, ಪ್ರೇಕ್ಷಕರೂ ಸಹ ರಾಗಿ ಮುದ್ದೆ–ನಾಟಿ ಕೂಳಿ ಸಾರಿನ ಸವಿಯಲ್ಲಿ ತೊಡಗಿ ಮಸ್ತಾಗಿ ಎಂಜಾಯ್ ಮಾಡಿದರು.






