ದಕ್ಷಿಣ ಕನ್ನಡದಲ್ಲಿ ಮತ್ತೊಂದು ದಾರುಣ ರಸ್ತೆ ದುರಂತ ಸಂಭವಿಸಿದೆ. ಬಂಟ್ವಾಳ ತಾಲೂಕಿನ ಬಿಸಿ ರೋಡ್ ಸರ್ಕಲ್ ಬಳಿ ನಡೆದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಬಿಸಿರೋಡ್ ಸರ್ಕಲ್ನ ಬಳಿ ವೇಗವಾಗಿ ಬರುತ್ತಿದ್ದ ಇನ್ನೋವಾ ಕಾರು ಎನ್.ಜಿ ಸರ್ಕಲ್ಗೆ ಢಿಕ್ಕಿ ಹೊಡೆದ ಪರಿಣಾಮ ವಾಹನ ಸಂಪೂರ್ಣವಾಗಿ ನಾಶವಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ರಮ್ಯ (23), ರವಿ (64), ನಂಜಮ್ಮ (75) ಎಂಬವರು ದುರ್ಘಟನೆಯಲ್ಲಿ ಬಲಿಯಾದವರು. ಮೃತರು ಬೆಂಗಳೂರಿನ ಪೀಣ್ಯದ ನಿವಾಸಿಗಳು ಎಂದು ತಿಳಿದುಬಂದಿದೆ.
ಉಡುಪಿ ಶ್ರೀಕೃಷ್ಣ ಮಠದ ದರ್ಶನಕ್ಕಾಗಿ ಹೊರಟಿದ್ದ ಈ ಕುಟುಂಬಕ್ಕೆ ದಾರಿಯಲ್ಲೇ ದುರಂತ ಬಂದು ದುಃಖ ತಂದಿದೆ. ಕಾರಿನಲ್ಲಿದ್ದ ರವಿಯವರು ಘಟನೆ ನಡೆದಲ್ಲೇ ಸಾವನ್ನಪ್ಪಿದ್ದು, ಉಳಿದ ಇಬ್ಬರು ಆಸ್ಪತ್ರೆಗೆ ಸಾಗಿಸಿದರೂ ಜೀವಿತ ಉಳಿಯಲಿಲ್ಲ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಇನ್ನೋವಾ ಕಾರಿನಲ್ಲಿ ಇದ್ದ ಕೀರ್ತಿ, ಸುಶೀಲಾ, ಬಿಂದು ಮತ್ತು ಪ್ರಶಾಂತ್ ಎಂಬ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.
ಸಿರೋಡು–ಅಡ್ಡಹೊಳೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಭಾಗವಾಗಿ ನಿರ್ಮಿಸಲಾಗಿರುವ ಹೊಸ ಸರ್ಕಲ್ ವಿನ್ಯಾಸ ಅವೈಜ್ಞಾನಿಕವಾಗಿದೆ ಎಂಬ ಆರೋಪ ಸ್ಥಳೀಯರಿಂದ ವ್ಯಕ್ತವಾಗಿದೆ. ಸರ್ಕಲ್ನ ಅಸಮರ್ಪಕ ರಚನೆಯೇ ಈ ದುರ್ಘಟನಿಗೆ ಕಾರಣ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.
ಈ ಸಂಬಂಧ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿ ಮುಂದಿನ ತನಿಖೆ ಆರಂಭಿಸಲಾಗಿದೆ.






