---Advertisement---

ಬಳ್ಳಾರಿ : ಕೇವಲ 10ನೇ ತರಗತಿ ಓದಿ ‘ಡಾಕ್ಟರ್’ ಆಗಿ ನಟಿಸಿದ ನಕಲಿ ವೈದ್ಯನ ಕ್ಲಿನಿಕ್‌ ಸೀಜ್!

On: November 14, 2025 2:04 PM
Follow Us:
---Advertisement---

ಕರ್ನಾಟಕದಲ್ಲಿ ನಕಲಿ ವೈದ್ಯರ ದಂಧೆ ತೀವ್ರವಾಗಿ ಹೆಚ್ಚುತ್ತಿದೆ. ವೈದ್ಯಕೀಯ ಪದವಿ ಇಲ್ಲದೆ ಜನತೆಗೆ ತಾನು ವೈದ್ಯನೆಂದು ಪರಿಚಯಿಸಿಕೊಂಡು ಚಿಕಿತ್ಸೆ ನೀಡುತ್ತಿದ್ದ ಬಳ್ಳಾರಿ ಜಿಲ್ಲೆಯ ಸಂಡೂರಿನ ತೋರಣಗಲ್ಲು ಗ್ರಾಮದ ‘ಅಭಿಲಾಷ್ ಕ್ಲಿನಿಕ್’ನ ಬಿ.ಎನ್. ವೀರೇಶ್‌ರ ಕ್ಲಿನಿಕ್ ಅನ್ನು ಆರೋಗ್ಯ ಇಲಾಖೆ ಸೀಜ್ ಮಾಡಿದೆ. ಕೇವಲ 10ನೇ ತರಗತಿ ವರೆಗೆ ವಿದ್ಯಾಭ್ಯಾಸ ಮಾಡಿದ ವೀರೇಶ್, ಔಷಧಿಗಳ ಬಗ್ಗೆ ತಿಳಿದ ಮಾಹಿತಿಯನ್ನು ಬಳಸಿಕೊಂಡು ವೈದ್ಯನೆಂದು ಸುಳ್ಳಾಗಿ ಹೇಳಿ ಜನರಿಗೆ ಚಿಕಿತ್ಸೆ ನೀಡುತ್ತಿದ್ದನೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಲ್ಲಾ ರಮೇಶ್ ಬಾಬು ತಿಳಿಸಿದ್ದಾರೆ.

ಸಾರ್ವಜನಿಕರಿಂದ ಬಂದ ದೂರು ಹಿನ್ನೆಲೆ, ಜಿಲ್ಲೆಯ ಆರೋಗ್ಯ ಅಧಿಕಾರಿಗಳ ಆದೇಶದಂತೆ ಸಂಡೂರಿನ ನೋಡಲ್ ಅಧಿಕಾರಿಯಾದ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ. ಇಂದ್ರಾಣಿ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಭರತ್ ನೇತೃತ್ವದ ತಂಡ ದಾಳಿ ನಡೆಸಿ ಕ್ಲಿನಿಕ್ ಅನ್ನು ಜಪ್ತಿ ಮಾಡಿದ್ದು, ಮುಂದಿನ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ.

ಆರೋಗ್ಯದ ದೃಷ್ಟಿಯಿಂದ ಅಧಿಕೃತ ವೈದ್ಯಕೀಯ ಪದವಿದಾರರ ಬಳಿಯೇ ಚಿಕಿತ್ಸೆ ಪಡೆಯಬೇಕು. ಸರಿಯಾದ ವೈದ್ಯರಿಂದಲೇ ತಪಾಸಣೆ ಮಾಡಿಸಿಕೊಂಡರೆ ಅನಗತ್ಯ ಅಪಾಯಗಳನ್ನು ತಪ್ಪಿಸಿಕೊಳ್ಳಬಹುದು ಎಂದು ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಮನವಿ ಮಾಡಿದೆ.

ಗ್ರಾಮಾಂತರ ಪ್ರದೇಶಗಳಲ್ಲಿ ವೈದ್ಯರಂತೆ ಕಾಣಿಸಿಕೊಳ್ಳುವವರು ಕಂಡುಬಂದರೆ, ಅವರ ವೈದ್ಯಕೀಯ ಅರ್ಹತೆಯನ್ನು ಪರಿಶೀಲಿಸಿ ನಂತರವೇ ಚಿಕಿತ್ಸೆ ಪಡೆಯಬೇಕು. ನಕಲಿ ವೈದ್ಯರು ಎಂದು ಅನುಮಾನಿಸಿದವರ ಬಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಾಲಯಕ್ಕೆ ದೂರು ನೀಡಬಹುದು. ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ–2007ರಡಿ ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ದಾಳಿಯ ವೇಳೆ ಹಿರಿಯ ಆರೋಗ್ಯ ಪರಿಶೀಲನಾ ಅಧಿಕಾರಿ ಬಂಡೆಗೌಡ ಮತ್ತು ಅಧಿಕಾರಿ ನಿಜಾಮುದ್ದೀನ್ ಉಪಸ್ಥಿತರಿದ್ದರು.

ರಾಜ್ಯ ಆರೋಗ್ಯ ಇಲಾಖೆ ನಕಲಿ ವೈದ್ಯರ ವಿರುದ್ಧ ನಿರಂತರ ಕ್ರಮ ಕೈಗೊಂಡರೂ, ಇಂತಹವರ ಸಂಖ್ಯೆ ಕಡಿಮೆಯಾಗದೆ ಹೆಚ್ಚುತ್ತಿದೆ. ಕಳೆದ ಒಂದು ವರ್ಷದಲ್ಲಿ 256 ನಕಲಿ ವೈದ್ಯರನ್ನು ಪತ್ತೆ ಮಾಡಿ ಇಲಾಖೆಯವರು ಕಾನೂನು ಕ್ರಮ ಜರುಗಿಸಿದ್ದಾರೆ.

2024ರ ಏಪ್ರಿಲ್‌ನಿಂದ ಇಂದಿನವರೆಗೆ ರಾಜ್ಯದ ವಿವಿಧೆಡೆ ಕಾರ್ಯನಿರ್ವಹಿಸುತ್ತಿದ್ದ 256 ನಕಲಿ ವೈದ್ಯರನ್ನು ಗುರುತಿಸಲಾಗಿದೆ. ಇವರಲ್ಲಿ ನಾಲ್ವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. 89 ಕ್ಲಿನಿಕ್‌ಗಳನ್ನು ಮುಚ್ಚಲಾಗಿದ್ದು, 154 ಮಂದಿಗೆ ದಂಡ ವಿಧಿಸಲಾಗಿದೆ. ಆದರೆ ಕೇವಲ 39 ಜನ ಮಾತ್ರ ದಂಡ ಪಾವತಿಸಿದ್ದಾರೆ. ಒಂಬತ್ತು ಪ್ರಕರಣಗಳು ವಿಭಿನ್ನ ನ್ಯಾಯಾಲಯಗಳಲ್ಲಿ ವಿಚಾರಣೆಯಲ್ಲಿವೆ.

ರಾಜ್ಯದ ಗಡಿಭಾಗ ಜಿಲ್ಲೆಗಳಲ್ಲಿ ನಕಲಿ ವೈದ್ಯರ ಸಂಖ್ಯೆ ಇನ್ನಷ್ಟು ಹೆಚ್ಚು. ಕಲಬುರಗಿಯಲ್ಲಿ 111, ಕೋಲಾರದಲ್ಲಿ 31 ಮತ್ತು ಚಾಮರಾಜನಗರದಲ್ಲಿ 22 ನಕಲಿ ವೈದ್ಯರನ್ನು ಪತ್ತೆಹಚ್ಚಲಾಗಿದೆ ಎಂದು ಆರೋಗ್ಯ ಇಲಾಖೆ ವಿವರಿಸಿದೆ.

krutika naik

Krutika Naik is an editor and writer at Karnataka Stories, where she covers culture, local news, and inspiring voices from across the state. With a passion for storytelling and a keen eye for detail, Krutika brings real stories to life—one article at a time.

Join WhatsApp

Join Now

RELATED POSTS

Leave a Comment