ರಾಷ್ಟ್ರ ರಾಜಧಾನಿ ದೆಹಲಿಯ ಕೆಂಪು ಕೋಟೆಯ ಬಳಿ ಸಂಭವಿಸಿದ ಭೀಕರ ಕಾರ್ ಬಾಂಬ್ ಸ್ಫೋಟದ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳು ಆತ್ಮಾಹುತಿ ಬಾಂಬರ್ ಎಂದು ಶಂಕಿಸಲಾಗಿರುವ ಡಾ. ಉಮರ್ ಮೊಹಮ್ಮದ್ನ ಕುರಿತು ಹೊಸ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.
ಉಮರ್ ಈ ದಾಳಿಯ ಪೂರ್ಣ ಪ್ಲಾನ್ ಅನ್ನು ಟೆಲಿಗ್ರಾಮ್ (Telegram) ಮೂಲಕ ರೂಪಿಸಿದ್ದರು ಎಂದು ಮೂಲಗಳು ತಿಳಿಸಿವೆ. ಈ ಅಪ್ಲಿಕೇಶನ್ ಖಾಸಗಿ ಚಾಟ್ಗಳನ್ನು ಎನ್ಕ್ರಿಪ್ಟ್ ಮಾಡುವ ವ್ಯವಸ್ಥೆ ಹೊಂದಿರುವುದರಿಂದ ಉಗ್ರಗಾಮಿಗಳು ತಮ್ಮ ಸಂವಹನವನ್ನು ಸುಲಭವಾಗಿ ರಹಸ್ಯವಾಗಿ ನಡೆಸಲು ಬಳಸುತ್ತಿದ್ದರು ಎಂಬ ಶಂಕೆ ವ್ಯಕ್ತವಾಗಿದೆ.
ಶಂಕಿತ ಉಮರ್ ಮೊಹಮ್ಮದ್ ಯಾರು?
ಕಳೆದ ಕೆಲವು ವಾರಗಳಲ್ಲಿ ಪೊಲೀಸರು ಈ ಜಾಲದ ಸದಸ್ಯರಿಂದ ಸುಮಾರು 2,900 ಕೆಜಿ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಂಡಿದ್ದರಿಂದ, ಉಮರ್ ಆತಂಕಗೊಂಡು ಫರೀದಾಬಾದ್ನಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಇದೇ ಉಮರ್ ಮೊಹಮ್ಮದ್ ದೆಹಲಿಯ ಸ್ಫೋಟದ ಪ್ರಮುಖ ಶಂಕಿತನಾಗಿದ್ದಾನೆ.
ದಾಳಿ ಹೇಗೆ ನಡೆಯಿತು?
ಮೂಲಗಳ ಪ್ರಕಾರ, ಉಮರ್ ಮೊಹಮ್ಮದ್ ಮತ್ತು ಆತನ ಸಹಚರರು ಅಮೋನಿಯಂ ನೈಟ್ರೇಟ್ ಹಾಗೂ ಫ್ಯುಯೆಲ್ ಆಯಿಲ್ ಮಿಶ್ರಣವನ್ನು ಬಳಸಿಕೊಂಡು ಕಾರ್ ಬಾಂಬ್ ಸಿದ್ಧಪಡಿಸಿದ್ದರು. ಈ ಬಾಂಬ್ಗೆ ಡಿಟೋನೇಟರ್ ಅಳವಡಿಸಿ, ಕೆಂಪು ಕೋಟೆ ಸಮೀಪದ ಜನಸಂಚಾರ ಪ್ರದೇಶದಲ್ಲಿ ಸ್ಫೋಟಗೊಳಿಸಲು ಯೋಜಿಸಲಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಬಿಳಿ ಬಣ್ಣದ ಹ್ಯುಂಡೈ ಐ20 ಕಾರು ಬಾದರ್ಪುರ ಗಡಿಯ ಮೂಲಕ ದೆಹಲಿಗೆ ಪ್ರವೇಶಿಸಿ ಹಳೆಯ ದೆಹಲಿಯ ಹೊರವರ್ತುಲ ಮಾರ್ಗದ ಮೂಲಕ ಕೆಂಪು ಕೋಟೆಯವರೆಗೆ ಬಂದಿದೆ.
HR 26CE7674 ನಂಬರ್ ಪ್ಲೇಟ್ ಹೊಂದಿದ್ದ ಈ ವಾಹನವನ್ನು ಸಂಜೆ 3:19ಕ್ಕೆ ಪಾರ್ಕಿಂಗ್ನಲ್ಲಿ ನಿಲ್ಲಿಸಿ, ಸುಮಾರು 6:30ರ ಸುಮಾರಿಗೆ ಉಮರ್ ಕಾರ್ನ್ನು ಸ್ಫೋಟಗೊಳಿಸಿದ್ದಾನೆ ಎನ್ನಲಾಗಿದೆ. ಈ ಅವಧಿಯಲ್ಲಿ ಆತ ಕಾರಿನೊಳಗೆ ಮೂರು ಗಂಟೆಗಳಿಗೂ ಹೆಚ್ಚು ಕಾಲ ನಿರಂತರವಾಗಿ ಇದ್ದು, ಒಂದೇ ಕ್ಷಣವೂ ಹೊರಗೆ ಬಂದಿರಲಿಲ್ಲ.
ಕಾರಿನ ವಹಿವಾಟಿನ ಸರಣಿ
ತನಿಖೆಯಿಂದ ಬಹಿರಂಗವಾದಂತೆ, ದಾಳಿಗೆ ಬಳಸಿದ ಕಾರು ಹಲವು ಬಾರಿ ಮಾಲೀಕತ್ವ ಬದಲಿಸಿಕೊಂಡಿತ್ತು. ಮಾರ್ಚ್ 2025ರಲ್ಲಿ ಸಲ್ಮಾನ್ ಎಂಬಾತ ದೇವಿಂದರ್ಗೆ ಕಾರನ್ನು ಮಾರಾಟ ಮಾಡಿದ. ನಂತರ ಅಕ್ಟೋಬರ್ 29ರಂದು ದೇವಿಂದರ್ನಿಂದ ಅಮೀರ್ಗೆ, ಅಮೀರ್ನಿಂದ ತಾರಿಖ್ಗೆ, ಕೊನೆಗೆ ಉಮರ್ ಮೊಹಮ್ಮದ್ಗೆ ಕಾರು ಹಸ್ತಾಂತರಗೊಂಡಿತ್ತು.
ಈ ಸರಣಿಯಲ್ಲಿ ದೇವಿಂದರ್ ಮತ್ತು ಅಮೀರ್ ಇಬ್ಬರೂ ದೆಹಲಿ ಪೊಲೀಸ್ ತಂಡದ ವಶದಲ್ಲಿದ್ದು, ವಿಚಾರಣೆ ಮುಂದುವರಿಯುತ್ತಿದೆ. ಅಮೀರ್ ಉಮರ್ನ ಸಹೋದರನಾಗಿದ್ದಾನೆ ಎನ್ನಲಾಗಿದೆ. ದೇವಿಂದರ್ನಿಂದ ಕಾರು ಖರೀದಿಸಿದ ಬಳಿಕ ಉಮರ್ ಅದನ್ನು ಚಲಾಯಿಸುತ್ತಿರುವ ದೃಶ್ಯ ಸಿಸಿಟಿವಿ ಚಿತ್ರಗಳಲ್ಲಿ ಪತ್ತೆಯಾಗಿದೆ.
ಇದಲ್ಲದೆ, ತನಿಖಾ ಮೂಲಗಳು ಹೇಳುವಂತೆ, ಉಗ್ರರು ಸಾಮಾಜಿಕ ಮಾಧ್ಯಮ ಹಾಗೂ ಮೆಸೇಜಿಂಗ್ ಆಪ್ಗಳ ದುರುಪಯೋಗ ಮಾಡಿಕೊಂಡು ರಾಷ್ಟ್ರದ ಭದ್ರತೆಗೆ ಧಕ್ಕೆ ಉಂಟುಮಾಡುವಂತಹ ಭಯೋತ್ಪಾದಕ ಚಟುವಟಿಕೆಗಳನ್ನು ಸಂಘಟಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ.






