ದೆಹಲಿಯಲ್ಲಿ 12 ಜನರ ಪ್ರಾಣ ಕಸಿದ ಸ್ಫೋಟದ ಹಿನ್ನೆಲೆಯ ತನಿಖೆ ಮುಂದುವರಿಯುತ್ತಿದ್ದು, ತನಿಖಾಧಿಕಾರಿಗಳು ಸ್ಫೋಟದ ಮೂಲಕ್ಕೆ ಸಂಬಂಧಿಸಿದಂತೆ ಹಲವಾರು ಸ್ಫೋಟಕ ಅಂಶಗಳನ್ನು ಪತ್ತೆಹಚ್ಚುತ್ತಿದ್ದಾರೆ. ಹರಿಯಾಣದ ಫರೀದಾಬಾದ್‌ನಲ್ಲಿ ಪತ್ತೆಯಾದ 3 ಸಾವಿರ ಕೆಜಿ ಸ್ಫೋಟಕದ ಪ್ರಕರಣದ ಬೆನ್ನಲ್ಲೇ ದೆಹಲಿಯಲ್ಲಿ ನಡೆದ ಈ ಆತ್ಮಹತ್ಯಾ ದಾಳಿ ರಾಷ್ಟ್ರದ ಭದ್ರತೆಗೆ ದೊಡ್ಡ ಸವಾಲು ಎಸೆದಿದೆ.
ಈ ಭೀಕರ ಘಟನೆಯಲ್ಲಿ ಕನಿಷ್ಠ 12 ಮಂದಿ ಸಾವಿಗೀಡಾಗಿದ್ದು, 20ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಶೇಷವೆಂದರೆ, ಈ ದಾಳಿಯಲ್ಲಿ ಭಾಗಿಯಾದವರು ವೈದ್ಯಕೀಯ ಕ್ಷೇತ್ರದ ನುರಿತ ವೈದ್ಯರಾಗಿದ್ದಾರೆ ಎನ್ನುವುದು ತನಿಖಾಧಿಕಾರಿಗಳಿಗೆ ಆಘಾತ ಮೂಡಿಸಿದೆ.
ದೆಹಲಿಯ ಸ್ಫೋಟಕ್ಕೂ ಕೆಲವೇ ಗಂಟೆಗಳ ಮೊದಲು, ಹರಿಯಾಣದ ಫರೀದಾಬಾದ್‌ನಲ್ಲಿ ಭದ್ರತಾ ಪಡೆಗಳು ವಿಶೇಷ ಶೋಧ ಕಾರ್ಯಾಚರಣೆ ನಡೆಸಿ ಸುಮಾರು 3,000 ಕೆಜಿ ಸ್ಫೋಟಕ ವಸ್ತುಗಳನ್ನು ಪತ್ತೆಹಚ್ಚಿದ್ದವು. ಜಮ್ಮು ಮತ್ತು ಕಾಶ್ಮೀರ ಪೊಲೀಸರ ಸಹಕಾರದೊಂದಿಗೆ ನಡೆದ ಈ ಕಾರ್ಯಾಚರಣೆಯಲ್ಲಿ, ಐಇಡಿ ತಯಾರಿಕೆಗೆ ಬೇಕಾದ ವಸ್ತುಗಳು ಹಾಗೂ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಯಾಗಿರುವ ಡಾ. ಮುಜಮ್ಮಿಲ್‌ನ ಮನೆಯಿಂದ 360 ಕೆಜಿ ಸ್ಫೋಟಕ ವಸ್ತುಗಳು ಸೇರಿದಂತೆ ಪಿಸ್ತೂಲ್‌ಗಳು, ರೈಫಲ್‌ಗಳು, ಟೈಮರ್‌ಗಳು, ಬ್ಯಾಟರಿ ಸೆಟ್‌ಗಳು, ವಾಕಿ-ಟಾಕಿ, ಹಾಗೂ ಶಸ್ತ್ರಾಸ್ತ್ರಗಳ ಬೃಹತ್ ಸಂಗ್ರಹ ಪತ್ತೆಯಾಗಿದೆ. ತನಿಖಾಧಿಕಾರಿಗಳ ಪ್ರಕಾರ, ಅಸಾಲ್ಟ್ ರೈಫಲ್‌ಗಳು, ಮ್ಯಾಗಜೀನ್‌ಗಳು ಮತ್ತು 83 ಲೈವ್ ಕಾರ್ಟ್ರಿಡ್ಜ್‌ಗಳು ಸೇರಿದಂತೆ ಅನೇಕ ಅಪಾಯಕಾರಿ ವಸ್ತುಗಳನ್ನು ಸ್ಥಳದಲ್ಲೇ ವಶಪಡಿಸಿಕೊಂಡಿದ್ದಾರೆ.
ಫರೀದಾಬಾದ್‌ನ ಇನ್ನೊಂದು ಮನೆಯಿಂದ ಅಧಿಕಾರಿಗಳು 2,563 ಕೆಜಿ ಶಂಕಿತ ಸ್ಫೋಟಕ ವಸ್ತುಗಳನ್ನು ಪತ್ತೆಹಚ್ಚಿದ್ದಾರೆ. ಧೋಜ್ ಪ್ರದೇಶದಲ್ಲಿನ ಬಾಡಿಗೆ ಮನೆಯಲ್ಲಿ ಕಳೆದ ಮೂರು ವರ್ಷಗಳಿಂದ ಸ್ಫೋಟಕಗಳ ಸಂಗ್ರಹ ನಡೆಯುತ್ತಿತ್ತು ಎಂಬುದನ್ನು ತನಿಖೆ ಬಹಿರಂಗಪಡಿಸಿದೆ. ಅಲ್ಲಿ 350 ಕೆಜಿ ಸ್ಫೋಟಕಗಳು, 20 ಟೈಮರ್‌ಗಳು, ಅಸಾಲ್ಟ್ ರೈಫಲ್‌ಗಳು ಹಾಗೂ ಹಲವಾರು ಹ್ಯಾಂಡ್‌ಗನ್‌ಗಳು ಸಿಕ್ಕಿವೆ. ಮತ್ತೊಂದು ಮನೆ ಫತೇಪುರ್ ಟಾಗಾ ಗ್ರಾಮದಲ್ಲಿದ್ದು, ಅದು ಧೋಜ್‌ನಿಂದ ಕೇವಲ ನಾಲ್ಕು ಕಿಲೋಮೀಟರ್ ದೂರದಲ್ಲಿದೆ.
ತನಿಖಾಧಿಕಾರಿಗಳ ಪ್ರಾಥಮಿಕ ವರದಿಯ ಪ್ರಕಾರ, ಈ ಸ್ಫೋಟಕ ಸಂಗ್ರಹವು ದೇಶದ ಹಲವು ನಗರಗಳಲ್ಲಿ ಬಾಂಬ್ ಸ್ಫೋಟ ನಡೆಸುವ ಉದ್ದೇಶಕ್ಕಾಗಿ ಮಾಡಲಾಗಿತ್ತು. ಉಗ್ರರು ಭೀಕರ ಸಂಚು ರೂಪಿಸಿದ್ದು, ಅದು ಯಶಸ್ವಿಯಾಗಿದ್ದರೆ ದೇಶದ ಇತಿಹಾಸದಲ್ಲೇ ದೊಡ್ಡ ಮಟ್ಟದ ಸಾವುನೋವು ಮತ್ತು ನಾಶ ಸಂಭವಿಸಿತ್ತಿತ್ತು ಎಂಬ ಆತಂಕ ಅಧಿಕಾರಿಗಳಲ್ಲಿ ವ್ಯಕ್ತವಾಗಿದೆ.






