ಪ್ರಿಯಕರನೊಡನೆ ಮಗಳು ಓಡಿಹೋದಳೆಂದ ಕೋಪಕ್ಕೆ ಆಕೆಯ ತಿಥಿಯನ್ನು ಆಚರಿಸಿದ ತಂದೆ ಇಡೀ ಊರಿಗೇ ಊಟ ಹಾಕಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಾಗರಾಳ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸಾಕಷ್ಟು ಚರ್ಚೆ ಕಾರಣವಾಗಿದೆ.
ನಾಗರಾಳ ಗ್ರಾಮದ ಶಿವಗೌಡ ಪಾಟೀಲ್ ಎಂಬುವವರಿಗೆ ನಾಲ್ಕು ಮಂದಿ ಹೆಣ್ಣು ಮಕ್ಕಳಿದ್ದು, ಅವರ ಪೈಕಿ ಸುಶ್ಮಿತಾ ಶಿವಗೌಡ ಪಾಟೀಲ್ (19) ಕೊನೆಯವಳಾಗಿದ್ದಳು. ಅದೇ ಗ್ರಾಮದಲ್ಲಿ ತಹಶೀಲ್ದಾರ್ ಕಚೇರಿಯಲ್ಲಿ ಗ್ರಾಮ ಸೇವಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ವಿಠಲ ಬಸ್ತವಾಡ ಎಂಬ 29 ವರ್ಷದ ಯುವಕನೊಂದಿಗೆ ಸುಶ್ಮಿತಾಗೆ ಪ್ರೇಮ ಅಂಕುರಿಸಿತ್ತು.
ಹೀಗಾಗಿ ಆತನೊಂದಿಗೆ ಮದುವೆಯಾಗಿ ಹೋಗಿದ್ದಳು. ಮಗಳ ಪ್ರೇಮದ ಬಗ್ಗೆ ಗೊತ್ತಿಲ್ಲದೇ ಮೊದಲು ಶಿವಗೌಡ ಅವರು ರಾಯಭಾಗ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಬಳಿಕ ಮಗಳ ಪ್ರೇಮದ ವಿಷಯ ಗೊತ್ತಾಗಿತ್ತು. ಇದರಿಂದ ಕಿಡಿಕಿಡಿಯಾದ ಶಿವಗೌಡ ತನ್ನ ಮಗಳು ಇನ್ನು ತಮ್ಮ ಪಾಲಿಗೆ ಸತ್ತಳೆಂದು ಘೋಷಿಸಿ ಶಾಸ್ತ್ರೋಕ್ತವಾಗಿ ಆಕೆಯ ತಿಥಿ ಆಚರಿಸಿದ್ದಲ್ಲದೇ, ಬಂಧುಬಳಗದೊಂದಿಗೆ ಊರಿನವರನ್ನೆಲ್ಲಾ ಕರೆದು ಊಟ ಹಾಕಿಸಿ ತಿಥಿಕಾರ್ಯ ಆಚರಣೆ ಮಾಡಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯಿಸಿರುವ ಶಿವಗೌಡ, ಸಂಸ್ಕಾರ ಬಿಟ್ಟು ನನ್ನ ಮಗಳು ಈ ರೀತಿ ಮಾಡಿದ್ದಾಳೆ. ನನ್ನ ಮನಸು ನೋಯಿಸಿದ್ದಾಳೆ. ಇನ್ನು ನಮ್ಮ ಪಾಲಿಗೆ ,ನಮ್ಮ ಮನೆಯವರ ಪಾಲಿಗೆ ಆಕೆ ತೀರಿಕೊಂಡಿದ್ದಾಳೆಂದು ಈ ರೀತಿ ಮಾಡಿದ್ದೇನೆ ಎಂದಿದ್ದಾರೆ.
ನನ್ನ ಮಗಳಿಗೆ ಕೇವಲ 19 ವರ್ಷ. ಎಲ್ಲರೂ ಹೆಣ್ಣು ಮಕ್ಕಳೇ ಆಗಿದ್ದು, ನನಗೆ ಗಂಡು ಮಕ್ಕಳಿಲ್ಲ. ವಯಸಾಗಿರುವ ಕಾಲದಲ್ಲಿ ಈ ರೀತಿ ಮಾಡುವುದು ಸರಿಯಲ್ಲ. ಯಾವುದೇ ಹೆಣ್ಣು ಮಕ್ಕಳಾಗಲೀ ಸಂಸ್ಕಾರ ಬಿಡಬೇಡಿ ಎಂದು ಹೇಳಿದರು.







1 thought on “ಬೆಳಗಾವಿ: ಪ್ರಿಯಕರನೊಡನೆ ಮಗಳು ಓಡಿಹೋದಳೆಂದ ಕೋಪಕ್ಕೆ ತಿಥಿ ಆಚರಿಸಿ ಊರಿಗೇ ಊಟ ಹಾಕಿದ ತಂದೆ!”