---Advertisement---

ರಾಜ್ಯದಲ್ಲಿ ಮಹಿಳೆಯರಿಗೆ ಮುಟ್ಟಿನ ರಜೆ ಘೋಷಣೆ..ಖುಷಿಯ ಬೆನ್ನಲ್ಲೇ ವಿರೋಧ ಯಾಕೆ? ಏನು ಇದರ ಹಿನ್ನೆಲೆ ?

On: October 10, 2025 9:22 AM
Follow Us:
---Advertisement---

ಪ್ರತಿಯೊಬ್ಬ ಹೆಣ್ಣಿನ ತಾಯಿತನದ ಹಾದಿಯ ಪ್ರಾರಂಭವೇ ಋತುಸ್ರಾವ. ಆದರೆ ಇಂದಿಗೂ ಈ ವಿಷಯವನ್ನು ಬಹಿರಂಗವಾಗಿ ಚರ್ಚಿಸುವುದು ಕೆಲವರಿಗೆ ಸಂಕೋಚದ ವಿಷಯವಾಗಿದೆ. ಗರ್ಭಾಶಯದ ಒಳಪದರಗಳು ಕುಗ್ಗಿ ಹೊರಬರುವ ಈ ಪ್ರಕ್ರಿಯೆಯ ಸಮಯದಲ್ಲಿ ಎದುರಾಗುವ ಹೊಟ್ಟೆನೋವು, ನರನೋವುಗಳು ಅಸಹನೀಯವಾಗಿರುತ್ತವೆ.

ಆ ಅಸಹನೀಯ ನೋವು ತಾಳದೇ ಒದ್ದಾಡುವ, ಪ್ರತಿ ತಿಂಗಳೂ ಹೊಟ್ಟೆ ನೋವಿಗೆ ಮಾತ್ರೆಗಳನ್ನು ಸೇವಿಸಿ ಹಲವಾರು ಸಮಸ್ಯೆಗಳನ್ನು ತಂದೊಡ್ಡಿಕೊಳ್ಳುತ್ತಿರುವ ದೊಡ್ಡ ವರ್ಗವೇ ಇದೆ. ಅದರಲ್ಲಿಯೂ ಒಂದು ಹಂತ ದಾಟಿದಾಗ ಮುಟ್ಟಿನ ಸಮಯದಲ್ಲಿ ಆಗುವ ಮೈಗ್ರೇನ್, ತಡೆದುಕೊಳ್ಳಲು ಅಸಾಧ್ಯ ಎನ್ನಿಸುವ ತಲೆನೋವು ಕೂಡ ಶಬ್ದಕ್ಕೆ ನಿಲುಕದ ಹಿಂಸೆ ಅದು. ಇದೆಲ್ಲಾ ಕಾರಣಗಳಿಂದ ರಾಜ್ಯ ಸರ್ಕಾರ, ಹೆಣ್ಣುಮಕ್ಕಳಿಗೆ ಮಾಸಿಕ ಒಂದು ದಿನವನ್ನು ಮುಟ್ಟಿದ ದಿನವನ್ನಾಗಿ ಇಂದು ಘೋಷಿಸಿದ್ದು, ಆ ದಿನ ರಜೆ ನೀಡುವಂತೆ ಕಚೇರಿ, ಇಲಾಖೆಗಳಿಗೆ ಆದೇಶಿಸಿದೆ.

ಉದ್ಯೋಗಿಗಳು ಮತ್ತು ಇತರ ಖಾಸಗಿ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೂ ಪ್ರತಿ ತಿಂಗಳಲ್ಲಿ ಒಂದು ದಿನದ ವೇತನ ಸಹಿತ ರಜೆ ನೀಡುವ ಮಹತ್ವದ ನಿರ್ಧಾರಕ್ಕೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಎಲ್ಲರೂ ಕಡ್ಡಾಯವಾಗಿ ರಜೆ ಕೊಡಬೇಕಿದೆ. ಇದನ್ನು ಕೇಳಿ, ಈ ಅಸಹನೀಯ ನೋವನ್ನು ಅನುಭವಿಸುತ್ತಿರುವ ಮಹಿಳೆಯರು ಖುಷಿ ಪಟ್ಟುಕೊಂಡಿದ್ದಾರೆ. ಆ ದಿನದ ನೋವನ್ನು ಅನುಭವಿಸಿ ಕಚೇರಿಯಲ್ಲಿ ಕೆಲಸ ಮಾಡುವ ಸ್ಥಿತಿಯಲ್ಲಿದ್ದ ಹಲವು ಮಹಿಳೆಯರಿಗೆ ಇದು ವರದಾನವಾಗಿ ಪರಿಣಮಿಸಿದೆ.

ಇದರ ಬಗ್ಗೆ ಇದಾಗಲೇ ವಿರೋಧಗಳೂ ವ್ಯಕ್ತವಾಗುತ್ತಿವೆ. ಎಲ್ಲಾ ಹೆಣ್ಣುಮಕ್ಕಳು ಅಥವಾ ಮಹಿಳೆಯರಿಗೆ ಮಾಸಿಕ ಋತುಸ್ರಾವದ ಸಮಯದಲ್ಲಿ ನೋವು ಆಗಲೇಬೇಕೆಂದೇನೂ ಇಲ್ಲ. ಎಷ್ಟೋ ಮಂದಿಗೆ ಏನೂ ಸಮಸ್ಯೆ ಆಗುವುದೇ ಇಲ್ಲ. ಆದರೆ ಅಂಥವರು ಕೂಡ ರಜೆ ಪಡೆದುಕೊಳ್ಳುವ ಸಾಧ್ಯತೆ ಇದೆ ಎನ್ನುವುದು ಕೆಲವರ ತಕರಾರು. ಆದರೆ ಇದಕ್ಕಿಂತಲೂ ಮುಖ್ಯವಾದ ಇನ್ನೊಂದು ಕಾರಣವಿದೆ.

ಇದಾಗಲೇ ಹಲವಾರು ಕಂಪೆನಿಗಳು ಮಹಿಳಾ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳದೇ ಹಿಂದೇಟು ಹಾಕುವುದು ಇದೆ. ಅವರಿಗೆ ಮದುವೆಯ ವೇಳೆ ಅಷ್ಟೇ ಅಲ್ಲದೇ ಗರ್ಭಧಾರಣೆಯ ಸಂದರ್ಭದಲ್ಲಿ ಐದಾರು ತಿಂಗಳು ವೇತನ ಸಹಿತ ರಜೆ ಕೊಡಬೇಕು. ಹೀಗೆ ಇರುವಾಗ ಇದೊಂದು ಬೇರೆ ಎಕ್ಸ್ಟ್ರಾ ರಜೆ. ಇವೆಲ್ಲಾ ಉಸಾಬರಿಯೇ ಬೇಡ ಎನ್ನುವ ಸಾಧ್ಯತೆಯೂ ಇದೆ ಎನ್ನುವ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

ಈ ನಿರ್ಧಾರದ ಬಗ್ಗೆ ಸಮಾಜದಲ್ಲಿ ಎರಡು ರೀತಿಯ ಅಭಿಪ್ರಾಯಗಳು ಕೇಳಿಬರುತ್ತಿವೆ. ಕೆಲವರು ಈಗಾಗಲೇ ಮಹಿಳೆಯರಿಗೆ ಸಿಎಲ್ ಹಾಗೂ ಸಿಕ್ ಲೀವ್ ಸೌಲಭ್ಯಗಳಿವೆ ಎಂದು ಹೇಳುತ್ತಿದ್ದರೆ, ಮತ್ತೊಂದೆಡೆ ನೋವು ಅನುಭವಿಸುವ ಹೆಣ್ಣುಮಕ್ಕಳಿಗೆ ಸರ್ಕಾರ ನೀಡಿರುವ ಈ ವಿಶೇಷ ರಜೆ ಅಗತ್ಯವಾಗಿದೆ ಎಂದು ಕೆಲವರು ಬೆಂಬಲಿಸುತ್ತಿದ್ದಾರೆ. ಮಹಿಳೆಯರ ಆರೋಗ್ಯದತ್ತ ಸರ್ಕಾರದ ಸ್ಪಂದನೆಗೆ ಸಂತೋಷ ವ್ಯಕ್ತಪಡಿಸುತ್ತಿರುವಾಗಲೇ, ಈ ವಿಚಾರವು ಚರ್ಚೆ ಹಾಗೂ ವಿವಾದಕ್ಕೂ ಕಾರಣವಾಗಿರುವುದು ವಿಷಾದನೀಯ.

ಕರ್ನಾಟಕದಲ್ಲಿ ‘ಮುಟ್ಟಿನ ರಜೆ’ ಹೊಸ ಯೋಜನೆಯಾಗಿದ್ದರೂ, ಇದು ದೇಶದ ಮಟ್ಟದಲ್ಲಿ ಹೊಸದಿಲ್ಲ. ಈ ರೀತಿಯ ಕ್ರಮವನ್ನು ಮೊದಲ ಬಾರಿಗೆ 1992ರಲ್ಲಿ ಬಿಹಾರದ ಮುಖ್ಯಮಂತ್ರಿಯಾಗಿದ್ದ ಲಾಲೂ ಪ್ರಸಾದ್ ಯಾದವ್ ಅವರು ಘೋಷಿಸಿದ್ದರು. ನಂತರ ಕೇರಳದಲ್ಲಿಯೂ ಅದೇ ಮಾದರಿಯನ್ನು ಅನುಸರಿಸಲಾಯಿತು. ಇದೀಗ ಕರ್ನಾಟಕ ಸರ್ಕಾರವೂ ಇದೇ ಹೆಜ್ಜೆಯನ್ನು ಇಟ್ಟಿದ್ದು, ರಾಜ್ಯದ ಹೆಣ್ಣುಮಕ್ಕಳು ಹರ್ಷದಿಂದ ಸ್ವಾಗತಿಸಿದ್ದಾರೆ.

ಆದಾಗ್ಯೂ, ಇದೀಗ ಮುಖ್ಯವಾದದ್ದು ಈ ನಿರ್ಧಾರವನ್ನು ಸಂಸ್ಥೆಗಳು ಮತ್ತು ಖಾಸಗಿ ಕಂಪನಿಗಳು ಹೇಗೆ ಅಳವಡಿಸಿಕೊಳ್ಳುತ್ತವೆ ಎನ್ನುವುದು. ಯಾವುದೇ ಸಮಸ್ಯೆಯಾಗದ ಮಹಿಳೆಯರು ಈ ಸೌಲಭ್ಯವನ್ನು ಅತಿಯಾಗಿ ಬಳಸದೇ, ನಿಜವಾಗಿಯೂ ನೋವು ಅನುಭವಿಸುವವರಿಗೆ ಅದನ್ನು ಬಳಕೆ ಮಾಡುವಂತೆಯಾಗಿ ಮಾನವೀಯ ದೃಷ್ಟಿಯಿಂದ ನಡೆದುಕೊಳ್ಳುವುದು ಅತ್ಯವಶ್ಯ. ಸರಿಯಾದ ಮನೋಭಾವದಿಂದ ಈ ನೀತಿ ಜಾರಿಯಾದರೆ, ಅದು ಮಹಿಳೆಯರ ಆರೋಗ್ಯ ಮತ್ತು ಗೌರವಕ್ಕೆ ಮಹತ್ವದ ಹೆಜ್ಜೆಯಾಗಿ ಪರಿಣಮಿಸಲಿದೆ.

krutika naik

Krutika Naik is an editor and writer at Karnataka Stories, where she covers culture, local news, and inspiring voices from across the state. With a passion for storytelling and a keen eye for detail, Krutika brings real stories to life—one article at a time.

Join WhatsApp

Join Now

RELATED POSTS

Leave a Comment