ಜಾತಿಗಣತಿ ಸಮೀಕ್ಷೆಗೆ ಹೋಗಿದ್ದ ಶಿಕ್ಷಕಿಯನ್ನೇ ವ್ಯಕ್ತಿಯೋರ್ವ ಕೂಡಿ ಹಾಕಿರುವ ಘಟನೆ ಬೆಂಗಳೂರಿನ ಕೊಡಿಗೆಹಳ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೋತಿ ಹೊಸಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಶಿಕ್ಷಕಿ ಸುಶೀಲಮ್ಮ ಎಂಬುವವರು ಸಮೀಕ್ಷೆಗಾಗಿ ಸಂದೀಪ್ ಎಂಬುವವರ ಮನೆಗೆ ಹೋಗಿದ್ದರು.
ಈ ವೇಳೆ ಸಂದೀಪ್ ಹಾಗೂ ಕುಟುಂಬದವರು ನೀವೇಕೆ ಇಲ್ಲಿಗೆ ಬಂದಿದ್ದೀರಿ? ನೀವು ನಿಜಕ್ಕೂ ಶಿಕ್ಷಕಿಯೇ? ನಿಮ್ಮ ಬಳಿ ಇರುವ ಐಡಿ ಕಾರ್ಡ್ ದಾಖಲೆಗಳನ್ನು ಕೊಡಿ ಎಂದು ಕಿತ್ತುಕೊಂಡಿದ್ದಾರೆ. ಅಲ್ಲದೇ ಶಿಕ್ಷಕಿ ಸಮಿಕ್ಷೆ ಕಾರ್ಯ ನಡೆಸಲು ಅಡ್ದಿಪಡಿಸಿದ್ದಾರೆ.
ಸ್ಥಳಕ್ಕೆ ಬಂದ ಸಂದೀಪ್ ಬಳಿ “ನಾನು ಶಿಕ್ಷಕಿ, ಗಣತಿ ಕಾರ್ಯಕ್ಕೆ ಬಂದಿದ್ದೇನೆ” ಎಂದು ಸುಶೀಲಮ್ಮ ಹೇಳಿದರೂ ಕೇಳಿಲ್ಲ.
ಸುಶೀಲಮ್ಮ ಬಳಿ ಇದ್ದ ದಾಖಲೆ ಕಿತ್ತುಕೊಂಡ ಸಂದೀಪ್ ಅವರನ್ನು ಮನೆಯ ಕಾಂಪೌಂಡ್ ನಲ್ಲಿ ಕೂಡಿ ಹಾಕಿದ್ದಾನೆ. ಇದರಿಂದ ಆತಂಕಗೊಂಡ ಸುಶೀಲಮ್ಮ 112 ಗೆ ಕರೆ ಮಾಡಿ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು ಸುಶೀಲಮ್ಮ ಅವರನ್ನು ರಕ್ಷಿಸಿದ್ದಾರೆ. ಕೋಡಿಗೆಹಳ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






