ಪತ್ನಿಯ ಅಕ್ರಮ ಸಂಬಂಧದಿಂದ ಬೇಸತ್ತ ಪತಿ ಆಕೆಯನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರು ಸಮೀಪದ ಮೂಕನಹಳ್ಳಿ ಎಂಬಲ್ಲಿ ನಡೆದಿದೆ. ಆರೋಪಿಯನ್ನು ವಿಜಯ್ ಎಂದು ಗುರುತಿಸಲಾಗಿದ್ದು, ಆತನ ಪತ್ನಿ ಗೀತಾ (29) ಕೊಲೆಯಾದ ಮಹಿಳೆ.
ಮೃತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ದಿಲೀಪ್ ಎಂಬಾತನ ಮೇಲೂ ಆರೋಪಿ ಹಲ್ಲೆ ನಡೆಸಿದ್ದು ಕಾಲಿಗೆ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಜಯ್ನ ಪತ್ನಿ ಗೀತಾಗೆ ತಾನು ಕೆಲಸ ಮಾಡುತ್ತಿದ್ದ ಖಾಸಗಿ ಫೈನಾನ್ಸ್ ಕಂಪನಿಯಲ್ಲಿ ಕೆಲಸಕ್ಕಿದ್ದ ದಿಲೀಪ್ ಎಂಬಾತನೊಂದಿಗೆ ಅಕ್ರಮ ಸಂಬಂಧವಿತ್ತು. ಈ ನಡುವೆ ಗೀತಾ ವರ್ಷದ ಹಿಂದೆ ಗಂಡನ ಮನೆ ತೊರೆದಿದ್ದಳು. 4 ತಿಂಗಳ ಕಾಲ ಹೆಚ್ಡಿ ಕೋಟೆ ತಾಲೂಕಿನ ಹೊಮ್ಮರಗಳ್ಳಿಪಾಳ್ಯದಲ್ಲಿರುವ ತನ್ನ ತವರು ಮನೆಗೆ ಸೇರಿದ್ದಳು. ಜೊತೆಗೆ ಆಕೆ ಹಲವು ಬಾರಿ ಪ್ರಿಯಕರನೊಂದಿಗೆ ಅಡ್ಡಾಡುವುದನ್ನು ಮಾಡಿಕೊಂಡಿದ್ದಳು.
ಈ ಬಗ್ಗೆ ದಂಪತಿಯ ನಡುವೆ ಅನೇಕ ಬಾರಿ ನ್ಯಾಯ ಪಂಚಾಯಿತಿ ನಡೆಸಿ, ಬುದ್ದಿವಾದ ಹೇಳಿದರೂ ಗೀತಾ ಮಾತ್ರ ಅಕ್ರಮ ಸಂಬಂಧವನ್ನು ಮುಂದುವರಿಸಿದ್ದಳು. ಸೋಮವಾರ ಎಂದರೆ ಸೆಪ್ಟೆಂಬರ್ 29 ರಂದು ರಾತ್ರಿ ವಿಜಯ್ ಮನೆಯಿಂದ ಹೊರ ಹೋಗಿದ್ದ ವೇಳೆ ದಿಲೀಪ್ ಮನೆಗೆ ಬಂದು ಗೀತಾಳನ್ನು ಹೊರಗೆ ಕರೆದೊಯ್ದಿದ್ದ. ಈ ವಿಚಾರ ವಿಜಯ್ಗೆ ಗೊತ್ತಾಗಿ, ಪತ್ನಿಯ ಬಳಿ ಪ್ರಶ್ನಿಸಿದ್ದ. ಇದರಿಂದಾಗಿ ಇಬ್ಬರ ನಡುವೆ ದೊಡ್ಡ ಗಲಾಟೆ ನಡೆದಿತ್ತು.
ಈ ವೇಳೆ ಗೀತಾ ಮನೆಯಲ್ಲಿದ್ದ ಮಚ್ಚನ್ನು ತಂದು ಗಂಡನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾಳೆ. ಆದರೆ ವಿಜಯ್ ಆಕೆಯ ಕೈಯಲ್ಲಿದ್ದ ಮಚ್ಚನ್ನು ಕಿತ್ತುಕೊಂಡು, ಅಣ್ಣ ಸುರೇಶ್ನೊಂದಿಗೆ ಸೇರಿ ಪತ್ನಿಯನ್ನು ಅಟ್ಟಾಡಿಸಿಕೊಂಡು ಹೋಗಿ ಪತ್ನಿಯನ್ನು ಕೊಚ್ಚಿ ಕೊಂದಿದ್ದಾರೆ. ಆಗ ಸ್ಥಳದಲ್ಲೇ ಇದ್ದ ದಿಲೀಪ್ನನ್ನು ಕೂಡಾ ಅಟ್ಟಾಡಿಸಿಕೊಂಡು ಹೋಗಿ ದೊಣ್ಣೆಯಿಂದ ಹೊಡೆದಿದ್ದಾರೆ. ಇದರಿಂದ ದಿಲೀಪ್ನ ಕಾಲಿಗೆ ಗಂಭೀರವಾದ ಗಾಯವಾಗಿದೆ.
ವಿಚಾರ ತಿಳಿಯುತ್ತಿದ್ದಂತೆ ಎಸ್ಪಿ ವಿಷ್ಣುವರ್ಧನ್, ಎಎಸ್ಪಿ ಮಲ್ಲಿಕ್, ಡಿವೈಎಸ್ಪಿ ಗೋಪಾಲಕೃಷ್ಣ, ಇನ್ಸ್ ಪೆಕ್ಟರ್ ಸಂತೋಷ್ ಕಶ್ಯಪ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮಹಿಳೆಯ ಶವವನ್ನು ಕೆ ಆರ್ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದ್ದು, ಹತ್ಯೆ ಸಂಬಂಧ ಗೀತಾಳ ತಂದೆ ವೆಂಕಟರಮಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ಸಹೋದರರಿಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ವಿಜಯ್ ತನ್ನ ಪತ್ನಿ ಗೀತಾ ಊಟದಲ್ಲಿ ನಿದ್ರೆ ಮಾತ್ರೆ ಬೆರೆಸಿ, ತಾನು ಮಲಗಿದ ಬಳಿಕ ತನ್ನ ಅಕ್ರಮ ಸಂಬಂಧ ಮುಂದುವರಿಸುತ್ತಿದ್ದಳು ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾನೆ.






