ಶಕ್ತಿಯ ಆರಾಧನೆಯ ನವರಾತ್ರಿ ಹಬ್ಬವು ಮತ್ತೆ ಆಗಮಿಸಿದ್ದು, ಎಲ್ಲೆಡೆ ಹಬ್ಬದ ಸಡಗರ ಮತ್ತು ಸಂಭ್ರಮ ಮನೆಮಾಡಿದೆ. ದೇವಿ ದೇವಾಲಯಗಳಲ್ಲಿ ಭಕ್ತಿಭಾವದಿಂದ ಆರಾಧನೆ ಪ್ರಾರಂಭವಾಗಿದ್ದು, ಶರನ್ನವರಾತ್ರಿ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಪ್ರತಿದಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ
ಉಡುಪಿ ನಗರ ವ್ಯಾಪ್ತಿಯಲ್ಲಿ ಅಂಬಲಪಾಡಿಯ ಜನಾರ್ದನ ಮಹಾಕಾಳಿ ದೇವಾಲಯ, ಕಡಿಯಾಳಿಯ ಮಹಿಷಮರ್ದಿನಿ ದೇಗುಲ, ಕನ್ನೆರ್ಪಾಡಿ ಜಯ ದುರ್ಗಾಪರಮೇಶ್ವರಿ ದೇವಾಲಯ, ಅಂಬಾಗಿಲು ದುರ್ಗಾಪರಮೇಶ್ವರಿ, ದೊಡ್ಡಣಗುಡ್ಡೆಯ ಆದಿಶಕ್ತಿ ಕ್ಷೇತ್ರ, ಬೈಲೂರಿನ ಮಹಿಷಮರ್ದಿನ ದೇವಸ್ಥಾನಗಳಲ್ಲಿ ಶರನ್ನವರಾತ್ರಿ ಮಹೋತ್ಸವವು ವಿಜೃಂಭಣೆಯಿಂದ ನಡೆಯುತ್ತದೆ.
ಜಿಲ್ಲೆಯಲ್ಲಿ ಅನೇಕ ಐತಿಹಾಸಿಕ ದೇವಾಲಯಗಳಿದ್ದು, ಇಲ್ಲಿ ಜಗನ್ಮಾತೆಯನ್ನು ಶಕ್ತಿಯ ವಿಭಿನ್ನ ಸ್ವರೂಪಗಳಲ್ಲಿ ಭಕ್ತರು ಆರಾಧಿಸುತ್ತಾರೆ. ನವರಾತ್ರಿ ಹಬ್ಬದ ಅಂಗವಾಗಿ ದೇವಾಲಯಗಳು ತೋರಣ, ತಳಿರು ಹಾಗೂ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿವೆ.
ಶ್ರೀಕೃಷ್ಣ ಮಠದ ಸುತ್ತಮುತ್ತ ಇರುವ ನಾಲ್ಕು ದುರ್ಗಾಲಯಗಳಲ್ಲಿ ಪ್ರಮುಖವಾದ ಬೈಲೂರು ಶ್ರೀ ಮಹಿಷಮರ್ದಿನಿ ದೇವಾಲಯದಲ್ಲಿ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ ಶರನ್ನವರಾತ್ರಿ ಮಹೋತ್ಸವ ನಡೆಯಲಿದೆ. ಇದೇ ರೀತಿ ಕಡಿಯಾಳಿಯ ಮಹಿಷಮರ್ದಿನಿ ದೇವಾಲಯದಲ್ಲೂ ಭಕ್ತಿ–ಭಾವಪೂರ್ಣ ಧಾರ್ಮಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿವೆ.
ನವರಾತ್ರಿ ಹಬ್ಬದ ಅಂಗವಾಗಿ ದೇವಾಲಯಗಳಲ್ಲಿ ಚಂಡಿಕಾ ಯಾಗ, ಸಹಸ್ರನಾಮಾರ್ಚನೆ, ದುರ್ಗಾ ನಮಸ್ಕಾರ ಪೂಜೆಗಳು ನಿರಂತರವಾಗಿ ನಡೆಯಲಿವೆ. ಒಂಬತ್ತು ದಿನಗಳ ಕಾಲ ದೇವಿಯನ್ನು ವಿಭಿನ್ನ ರೂಪಗಳಲ್ಲಿ ಅಲಂಕರಿಸಿ ಪೂಜಿಸಲಾಗುತ್ತಿದ್ದು, ಅನೇಕ ದೇವಾಲಯಗಳಲ್ಲಿ ಪ್ರತಿದಿನ ಭಕ್ತರಿಗೆ ಅನ್ನಸಂತರ್ಪಣೆಯೂ ಮಾಡಲಾಗುತ್ತಿದೆ.
ಕಾರ್ಕಳ ತಾಲ್ಲೂಕಿನ ಹಿರ್ಗಾನ ಲಕ್ಷ್ಮೀಪುರದ ಮಹಾಲಕ್ಷ್ಮಿ ದೇವಿ, ಅಡಿಪಾಯದ ಉಮಾಮಹೇಶ್ವರಿ ದೇವಿ, ಉಪ್ಪುಂದ ಶ್ರೀದುರ್ಗಾಪರಮೇಶ್ವರಿ, ಉಪ್ರಳ್ಳಿಯ ಶ್ರೀಕಾಳಿಕಾಂಬಾ ದೇವಿ, ಕಡಿಯಾಳಿಯ ಮಹಿಷಮರ್ದಿನಿ ದೇವಿ ಹಾಗೂ ಕೊಲ್ಲೂರಿನ ಪ್ರಸಿದ್ಧ ಶ್ರೀಮೂಕಾಂಬಿಕಾ ದೇವಾಲಯ ಸೇರಿ ಅನೇಕ ದೇವಾಲಯಗಳಲ್ಲಿ ಜಗನ್ಮಾತೆಯ ಆರಾಧನೆ ನಡೆಯುತ್ತಿದೆ. ವಿಶೇಷವಾಗಿ ಕೊಲ್ಲೂರು ಶ್ರೀಮೂಕಾಂಬಿಕಾ ದೇವಾಲಯದಲ್ಲಿ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ ಭವ್ಯ ನವರಾತ್ರಿ ಉತ್ಸವ ಆಯೋಜನೆಗೊಂಡಿದೆ.
ಭಕ್ತರಿಗೆ ಯಾವುದೇ ರೀತಿಯ ಸೇವಾ-ಸೌಲಭ್ಯಗಳ ಕೊರತೆಯಾಗದಂತೆ ದೇವಾಲಯ ಆಡಳಿತ ಮಂಡಳಿ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಉತ್ಸವ ದಿನಗಳಲ್ಲಿ ದಿನಂಪ್ರತಿ ಕಟ್ಟಕಟ್ಟಳೆ ಪೂಜೆಗಳ ಜೊತೆಗೆ ನವರಾತ್ರಿಯ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಕ್ಟೋಬರ್ 1ರಂದು ಮಹಾ ನವಮಿಯ ಪ್ರಯುಕ್ತ ಬೆಳಿಗ್ಗೆ 11.30ಕ್ಕೆ ಚಂಡಿಕಾಯಾಗ ಹಾಗೂ ಮಧ್ಯಾಹ್ನ 1.30ಕ್ಕೆ ಧನುರ್ ಲಗ್ನದಲ್ಲಿ ರಥೋತ್ಸವ ಜರುಗಲಿದೆ.
ಅಕ್ಟೋಬರ್ 2ರಂದು ವಿಜಯದಶಮಿಯ ಅಂಗವಾಗಿ ಬೆಳಿಗ್ಗೆ ವಿದ್ಯಾರಂಭ, ನವಾನ್ನ ಪ್ರಾಶನ ಹಾಗೂ ಸಂಜೆ ವಿಜಯೋತ್ಸವವನ್ನು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ದೇವಿಯ ಮಹಿಮೆ ಕುರಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
ನವರಾತ್ರಿ ಉತ್ಸವದ ಅಂಗವಾಗಿ ಪ್ರತಿದಿನ ಮಧ್ಯಾಹ್ನ 3ರಿಂದ ರಾತ್ರಿ 11.30ರವರೆಗೆ ಸ್ವರ್ಣಮುಖಿ ರಂಗಮಂಟಪದಲ್ಲಿ ದೇಶದ ವಿವಿಧ ಭಾಗಗಳಿಂದ ಬರುವ ಕಲಾ ತಂಡಗಳು ಭಕ್ತಿ-ಸಂಸ್ಕೃತಿ ಕಾರ್ಯಕ್ರಮಗಳನ್ನು ಪ್ರದರ್ಶಿಸಲಿವೆ. ದೇವಳದ ದಾಸೋಹ ಭವನದಲ್ಲಿ ಮಧ್ಯಾಹ್ನ ಹಾಗೂ ರಾತ್ರಿ ಪ್ರಸಾದ ವಿತರಣೆ ನಡೆಯಲಿದ್ದು, ದೇವಸ್ಥಾನವನ್ನು ವಿದ್ಯುತ್ ದೀಪಗಳು ಹಾಗೂ ಹೂವಿನ ಅಲಂಕಾರಗಳಿಂದ ಅದ್ದೂರಿಯಾಗಿ ಅಲಂಕರಿಸಲಾಗಿದೆ.






