ದಸರಾ ಹಬ್ಬದ ಅಂಗವಾಗಿ ಜಿಲ್ಲಾಡಳಿತ ನಗರದೆಲ್ಲೆಡೆ ಅಳವಡಿಸಿರುವ ಫ್ಲೆಕ್ಸ್ಗಳಲ್ಲಿ ಶಾಸಕ ಕೆ.ಎನ್.ರಾಜಣ್ಣ ಹಾಗೂ ವಿಧಾನ ಪರಿಷತ್ ಸದಸ್ಯ ಆರ್.ರಾಜೇಂದ್ರರ ಭಾವಚಿತ್ರ ಇರದಿರುವುದರಿಂದ ವಾಲ್ಮೀಕಿ ಸಮುದಾಯದ ನಾಯಕರು ಅಸಮಾಧಾನಗೊಂಡಿದ್ದಾರೆ. ಈ ಕುರಿತು ಶುಕ್ರವಾರ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯಲ್ಲಿ ವಿಷಯ ಚರ್ಚೆಗೆ ಬಂದಿದೆ.
ಸಭೆಯಲ್ಲಿ ಮಾತನಾಡಿದ ಮುಖಂಡ ಕುಪ್ಪೂರು ಶ್ರೀಧರ್ ಅವರು ಶಾಸಕರ ಭಾವಚಿತ್ರವನ್ನು ಉದ್ದೇಶಪೂರ್ವಕವಾಗಿ ಕೈಬಿಟ್ಟಿರುವುದನ್ನು ತೀವ್ರವಾಗಿ ಖಂಡಿಸಿ, ಸಮುದಾಯದ ಗೌರವಕ್ಕೆ ಧಕ್ಕೆ ತರುವಂತಹ ಕ್ರಮಗಳನ್ನು ಮುಂದೆಯೂ ಸಹಿಸಲಾಗುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
2023ರಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರು ವಾಲ್ಮೀಕಿ ಅಧ್ಯಯನ ಪೀಠಕ್ಕಾಗಿ 10 ಎಕರೆ ಜಾಗವನ್ನು ಮೀಸಲು ಮಾಡಿ, ವಿಶ್ವವಿದ್ಯಾಲಯದಲ್ಲಿ ವಿಶೇಷ ಅಧ್ಯಯನ ಕೇಂದ್ರ ಆರಂಭಿಸುವುದಾಗಿ ಭರವಸೆ ನೀಡಿದ್ದರು. ಆದರೆ ಈ ಘೋಷಣೆಯ ನಂತರ ಇಂದಿನವರೆಗೂ ಯಾವುದೇ ಸ್ಪಷ್ಟ ಬೆಳವಣಿಗೆ ಕಂಡುಬಂದಿಲ್ಲ.
ಇದರ ಕುರಿತು ಸ್ಪಷ್ಟ ಮಾಹಿತಿಯನ್ನು ನೀಡದೆ ಇರುವುದನ್ನು ಸಮುದಾಯದ ಮುಖಂಡರು ಪ್ರಶ್ನಿಸಿದ್ದು, ಮುಂಬರುವ ಜಯಂತಿ ಆಚರಣೆಯೊಳಗೆ ಈ ವಿಷಯದಲ್ಲಿ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
“ಪ್ರಸ್ತುತ ಜಯಂತಿ ಪ್ರಯುಕ್ತ ಕೇವಲ ಇಬ್ಬರಿಗೆ ಪ್ರೋತ್ಸಾಹ ಧನ ನೀಡುತ್ತಿದ್ದು, ಅದನ್ನು 10ಕ್ಕೆ ಹೆಚ್ಚಿಸಬೇಕು. ಕನಿಷ್ಠ ತಾಲ್ಲೂಕಿಗೆ ಒಬ್ಬರಂತೆ 10 ಸಾಧಕರನ್ನು ಗುರುತಿಸಿ ಸನ್ಮಾನಿಸಬೇಕು. ಜಯಂತಿ ದಿನ ಟೌನ್ಹಾಲ್ ವೃತ್ತದ ಅಂಬೇಡ್ಕರ್ ಪ್ರತಿಮೆಯಿಂದ ಬಾಲ ಭವನದ ವರೆಗೆ ಮೆರವಣಿಗೆ ನಡೆಸಬೇಕು” ಎಂದು ಮುಖಂಡರು ಒತ್ತಾಯಿಸಿದರು.
“ಕೈ ತಪ್ಪಿನಿಂದ ಆಗಿದೆ. ಕೂಡಲೇ ಗಮನಿಸಿ, ಎಲ್ಲ ಜನಪ್ರತಿನಿಧಿಗಳ ಚಿತ್ರಗಳು ಬರುವಂತೆ ನೋಡಿಕೊಳ್ಳಲಾಗಿದೆ” ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸ್ಪಷ್ಟಪಡಿಸಿದರು.
ಸೆಪ್ಟೆಂಬರ್ 26 ರಂದು ವಾಲ್ಮೀಕಿ ಸಮುದಾಯದ ಕುಂದು ಕೊರತೆ ಕುರಿತು ಸಭೆ ನಡೆಯಲಿದೆ. ಈ ಸಭೆಗಾಗಿ ಅಗತ್ಯವಿರುವ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುವಂತೆ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಸಭೆಗೆ ಜಿ.ಪಂ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ನಾಹಿದಾ ಜಮ್ಜಮ್ ಸೇರಿದಂತೆ ಅನೇಕ ಅಧಿಕಾರಿಗಳು ಹಾಜರಿದ್ದರು.






