ಗದಗ ತಾಲೂಕಿನ ಹರ್ಲಾಪುರದ ಬಳಿ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಇದರಲ್ಲಿ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ಗಳೊಂದಿಗೆ ಮೂವರು ಮೃತಪಟ್ಟಿದ್ದಾರೆ. ಮೃತರಲ್ಲಿ ಅರ್ಜುನ್ ನೆಲ್ಲೂರ (29), ವೀರೇಶ್ ಉಪ್ಪಾರ (31) ಹಾಗೂ ಅರ್ಜುನ್ ಅವರ ಚಿಕ್ಕಪ್ಪ ರವಿ ನೆಲ್ಲೂರ (43) ಸೇರಿದ್ದಾರೆ.
ಅತಿವೇಗದಲ್ಲಿ ಚಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಮೊದಲು ಡಿವೈಡರ್ಗೆ ಡಿಕ್ಕಿ ಹೊಡೆದು ನಂತರ ಬಸ್ಗೆ ಗುದ್ದಿದೆ. ಅಪಘಾತದ ಭಾರೀ ರಭಸಕ್ಕೆ ಕಾರು ಸಂಪೂರ್ಣ ನುಚ್ಚುನೂರಾಗಿ, ಅದರಲ್ಲಿದ್ದ ಮೂವರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಕಾರಿನ ಅವಶೇಷಗಳು ರಸ್ತೆಮೇಲೆ ಚದರಿಹೋಗಿರುವ ದೃಶ್ಯ ಕಂಡುಬಂದಿದೆ.
ಅಪಘಾತದ ಭೀಕರತೆ ವಿವರಿಸಿದ ಗೋವಾ ಬಸ್ ಸಿಬ್ಬಂದಿ
ಗೋವಾ ಬಸ್ ಚಾಲಕ ದಿಲೀಪ್ ಹಾಗೂ ನಿರ್ವಾಹಕ ಹೀರೇಶ್ ಅವರು ಅಪಘಾತದ ಭಯಾನಕ ದೃಶ್ಯವನ್ನು ನೆನೆದು ಹೇಳಿದ್ದಾರೆ. ಕಾರು ಅತಿವೇಗದಲ್ಲಿ ಬರುತ್ತಿದ್ದಂತೆ ಅಕಸ್ಮಿಕವಾಗಿ ಡಿವೈಡರ್ಗೆ ಡಿಕ್ಕಿ ಹೊಡೆದು, ಚೆಂಡಿನಂತೆ ಹಾರಿ ಬಂದು ಬಸ್ಗೆ ಅಪ್ಪಳಿಸಿತು. ಆ ಕ್ಷಣದಲ್ಲಿ ಬಸ್ನೊಳಗೆ ಬೆಚ್ಚಿಬೀಳುವಂತಾಯಿತು. ತಕ್ಷಣ ಕೆಳಗೆ ಇಳಿದು ನೋಡಿದಾಗ ಕಾರಿನಲ್ಲಿ ಕುಳಿತಿದ್ದ ಮೂವರು ಈಗಾಗಲೇ ಮೃತರಾಗಿದ್ದರು ಎಂದು ಹೇಳಿದ್ದಾರೆ.
ಮದುವೆ ಕನಸು ಸಾಕಾರವಾಗುವ ಮುನ್ನವೇ ದಾರುಣ ಅಂತ್ಯ. ಈ ದುರಂತದಲ್ಲಿ ಮೃತಪಟ್ಟ ಮೂವರ ಪೈಕಿ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ಗಳಿಗೆ ಶೀಘ್ರದಲ್ಲೇ ಮದುವೆಯಾಗಬೇಕಿತ್ತು. ಅರ್ಜುನ ನೆಲ್ಲೂರ ಮತ್ತು ವೀರೇಶ್ ಉಪ್ಪಾರ ಮದುವೆ ಹಂತಕ್ಕೆ ಬಂದಿದ್ದರು. ಇಬ್ಬರೂ ಪೊಲೀಸ್ ಇಲಾಖೆಯಲ್ಲಿ ಏಳು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು.
ವೀರೇಶ್ ಉಪ್ಪಾರ ಕೊಪ್ಪಳ ಜಿಲ್ಲಾ ಪೊಲೀಸ್ ವೈರ್ಲೆಸ್ ಶಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೆ, ಅರ್ಜುನ್ ನೆಲ್ಲೂರ ಹಾವೇರಿ ಜಿಲ್ಲಾ ಪೊಲೀಸ್ ವೈರ್ಲೆಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು.







1 thought on “ಗದಗ: ಹಸೆಮಣೆ ಏರಬೇಕಿದ್ದ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ ಸೇರಿ ಮೂವರು ಸಾವು!!”