ಸ್ಥಳ ಕಕ್ಕುಪ್ಪಿ ಗ್ರಾಮ, ಕೂಡ್ಲಿಗಿ ತಾಲ್ಲೂಕು, ವಿಜಯನಗರ ಜಿಲ್ಲೆಯಲ್ಲಿ ಸ್ನಾನಕ್ಕೆ ನೀರು ಕಾಯಿಸುತ್ತಿದ್ದ ವೇಳೆ ವಿದ್ಯುತ್ ಹೀಟರ್ ಸ್ಪರ್ಶಿಸಿದ ಕಾರಣ 9ನೇ ತರಗತಿಯ ಬಾಲಕಿ ದುರ್ಮರಣಕ್ಕೀಡಾದ ಘಟನೆ ಕೂಡ್ಲಿಗಿ ತಾಲ್ಲೂಕಿನ ಕಕ್ಕುಪ್ಪಿ ಗ್ರಾಮದಲ್ಲಿ ನಡೆದಿದೆ. ಮೃತಳು ಕೆ.ಎಚ್. ಭಾಗ್ಯಶ್ರೀ (15).
ಕಕ್ಕುಪ್ಪಿ ಗ್ರಾಮದ ಕೆ. ಹುಲೇಶ್ ಹಾಗೂ ಅಂಬಿಕಾ ದಂಪತಿಯ ಪುತ್ರಿ ಭಾಗ್ಯಶ್ರೀ (15), ಸರ್ಕಾರಿ ಪಿಯು ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ನಿನ್ನೆ ಬೆಳಗ್ಗೆ ಮನೆಯಲ್ಲಿ ಸಂಭವಿಸಿದ ವಿದ್ಯುತ್ ಅಪಘಾತದಲ್ಲಿ ದುರ್ಮರಣಕ್ಕೀಡಾದಳು. ಮಗಳ ಅಗಲಿಕೆಯಿಂದ ಪೋಷಕರು ಅಳಲಲ್ಲಿ ಮುಳುಗಿದ್ದು, ಈ ಘಟನೆ ಮಧ್ಯಮ ಹಾಗೂ ಶ್ರೀಮಂತ ವರ್ಗದ ಜನರಲ್ಲಿ ಹೀಟರ್ ಬಳಕೆಯ ಭಯ ಹುಟ್ಟಿಸಿದೆ.
ಸಾಮಾನ್ಯವಾಗಿ ಪ್ರತಿದಿನ ಮಾಡುವಂತೆ, ಶಾಲೆಗೆ ಹೋಗಲು ತಯಾರಾಗುತ್ತಿದ್ದ ಭಾಗ್ಯಶ್ರೀ ಬೆಳಿಗ್ಗೆ ಸ್ನಾನಕ್ಕೆ ನೀರು ಕಾಯಿಸಲು ಹೀಟರ್ ಹಾಕಿದ್ದಳು. ನೀರು ಕಾದ ನಂತರ ಸ್ನಾನ ಮುಗಿಸಿ, ಹೀಟರ್ ಸ್ವಿಚ್ ಆಫ್ ಮಾಡುವಾಗ ಆಕಸ್ಮಿಕವಾಗಿ ವಿದ್ಯುತ್ ಶಾಕ್ ತಗುಲಿದೆ. ಶಾಕ್ ತಗುಲುತ್ತಿದ್ದಂತೆಯೇ ಆಕೆ ನೆಲಕ್ಕುರುಳಿ ಪ್ರಜ್ಞೆ ಕಳೆದುಕೊಂಡಳು. ತಕ್ಷಣ ಕುಟುಂಬಸ್ಥರು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾದರೂ, ಮಾರ್ಗಮಧ್ಯೆ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು.
ಈ ದುರ್ಘಟನೆಗೆ ಸಂಬಂಧಿಸಿ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಈ ಘಟನೆಯು ವಿದ್ಯುತ್ ಉಪಕರಣಗಳ ಬಳಕೆಯಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಎಚ್ಚರಿಕೆ ನೀಡಿದೆ.






