ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ತುಮಕೂರಿನಲ್ಲಿ ಸಹ ಎಫ್ಐಆರ್ ದಾಖಲಾಗಿದೆ. ದ್ವೇಷಭಾಷಣ ಮಾಡಿದ ಆರೋಪದ ಮೇರೆಗೆ ತುಮಕೂರು ನಗರ ಠಾಣೆ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿದ್ದಾರೆ. ಶನಿವಾರ ನಡೆದ ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಯತ್ನಾಳ್ ಭಾಗಿಯಾಗಿದ್ದರು.
ಈ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಭಾನುವಾರ ರಾತ್ರಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಅನ್ಯ ಕೋಮಿನ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಪೊಲೀಸ್ ಸಿಬ್ಬಂದಿ ರಘುನಾಥ್ ಕೊಟ್ಟ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಮದ್ದೂರಿನಲ್ಲಿ ನನ್ನ ವಿರುದ್ಧ 70 ನೇ ಪ್ರಕರಣ ದಾಖಲಾಗಿದೆ. ತುಮಕೂರಿನಲ್ಲಿ 71 ಪ್ರಕರಣ ದಾಖಲಾಗಬಹುದು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದರು. ಅಷ್ಟರಲ್ಲೇ ಅವರ ವಿರುದ್ಧ 71 ನೇ ಪ್ರಕರಣ ದಾಖಲಾಗಿದೆ.
ಮದ್ದೂರಿನ ಬಳಿಕ ತುಮಕೂರಿನಲ್ಲಿ ಮತ್ತೊಂದು FIR ಹಾಕಲಾಗಿದೆ. ಮದ್ದೂರಿನಲ್ಲಿ ಸಬ್ಇನ್ಸ್ಪೆಕ್ಟರ್ ಮಂಜುನಾಥ್ ದೂರಿನನ್ವಯ, ಬಿಎನ್ಎಸ್ ಸೆಕ್ಷನ್ 196(1), 299, 353(2) ಅನ್ಯಕೋಮಿಗೆ ಧಕ್ಕೆ ಹಾಗೂ ಕೋಮುಗಳ ನಡುವೆ ವೈರತ್ವ ಉಂಟು ಮಾಡುವ ಭಾಷಣ ಮಾಡಿರುವ ಆರೋಪದಡಿ, ಎಫ್ಐಆರ್ ಹಾಕಲಾಗಿತ್ತು.
ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಸುಮೋಟೊ ಪ್ರಕರಣ ದಾಖಲಾಗಿದ್ದು, ದ್ವೇಷ ಭಾಷಣ ಮಾಡಿದ ಆರೋಪದ ಮೇಲೆ ಯತ್ನಾಳ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಸೆಪ್ಟೆಂಬರ್ 13ರಂದು ನಡೆದ ಹಿಂದೂ ಮಹಾಗಣಪತಿ ಶೋಭಾಯಾತ್ರೆಯಲ್ಲಿ ಯತ್ನಾಳ್ ಪಾಲ್ಗೊಂಡಿದ್ದು, ಅವರ ಮಾತುಗಳು ಇತರ ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿ ರಘುನಾಥ್ ದೂರು ನೀಡಿದ ಕಾರಣ, ಯತ್ನಾಳ್ ವಿರುದ್ಧ ಪ್ರಚೋದನಕಾರಿ ಭಾಷಣ ಆರೋಪದ ಮೇರೆಗೆ ಪ್ರಕರಣ ಹೂಡಲಾಗಿದೆ. ಸೆಪ್ಟೆಂಬರ್ 14ರ ಭಾನುವಾರ ರಾತ್ರಿ ನಗರ ಪೊಲೀಸ್ ಠಾಣೆಯೇ ಕೇಸ್ ದಾಖಲಿಸಿದೆ.
ತುಮಕೂರಿನಲ್ಲಿ ದಾಖಲಾಗಿರುವ ಇತ್ತೀಚಿನ ಪ್ರಕರಣದೊಂದಿಗೆ ಯತ್ನಾಳ್ ವಿರುದ್ಧ ಈಗಾಗಲೇ 71 ಎಫ್ಐಆರ್ಗಳು ದಾಖಲಾಗಿವೆ. ಮದ್ದೂರಿನಲ್ಲಿ 70ನೇ ಪ್ರಕರಣ ದಾಖಲಾಗಿದ್ದರೆ, ತುಮಕೂರು ಪೊಲೀಸ್ ಠಾಣೆಯಲ್ಲಿ 71ನೇ ಎಫ್ಐಆರ್ ದಾಖಲಾಗಿದೆ. ‘ಹಿಂದೂ ಫೈರ್ ಬ್ರಾಂಡ್’ ಎಂಬ ಖ್ಯಾತಿಯ ಯತ್ನಾಳ್ ಇದೀಗ ಎಫ್ಐಆರ್ ಹಾಕಿಸಿಕೊಳ್ಳುವ ವಿಷಯದಲ್ಲಿಯೂ ದಾಖಲೆ ಬರೆಯುವ ದಾರಿಯಲ್ಲಿ ಸಾಗುತ್ತಿದ್ದಾರೆ. ಅವರ ವಿರುದ್ಧ ಪ್ರಕರಣಗಳು ದಾಖಲಾಗುತ್ತಿರುವ ವೇಗವನ್ನು ಗಮನಿಸಿದರೆ, ಶೀಘ್ರದಲ್ಲೇ ಶತಕ ಮುಟ್ಟುವ ಸಾಧ್ಯತೆಗಳಿವೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.






