ಕಿನ್ನಿಮುಲ್ಕಿ ಸ್ವಾಗತ ಗೋಪುರದ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿಸುತ್ತಿದ್ದ ಸುಮಾರು ₹50 ಲಕ್ಷ ಮೌಲ್ಯದ 65 ಕೆ.ಜಿ. ಗಾಂಜಾವನ್ನು ಸೆನ್ ಅಪರಾಧ ಠಾಣೆ ಪೊಲೀಸರು ಗುರುವಾರ ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಹುಣಸೂರಿನ ಗಣೇಶ್ (38) ಹಾಗೂ ಆಂಧ್ರದ ಅನಂತಪುರದ ಪಿ.ಗೋಪಾಲ ರೆಡ್ಡಿ (43) ಬಂಧಿತರಾಗಿದ್ದಾರೆ. ಗೂಡ್ಸ್ ಲಾರಿಯನ್ನೂ ಪೊಲೀಸರು ಕಬಳಿಸಿದ್ದಾರೆ.
“ಉಡುಪಿ, ಮಂಗಳೂರು ಸೇರಿದಂತೆ ಕರಾವಳಿ ಭಾಗದಲ್ಲಿ ಸರಬರಾಜು ಮಾಡುವ ಉದ್ದೇಶದಿಂದ ಆರೋಪಿಗಳು ಗಾಂಜಾ ಸಾಗಿಸಿದ್ದಾರೆ. ಆಂಧ್ರ ಪ್ರದೇಶ-ಒಡಿಶಾ ಗಡಿ ಪ್ರದೇಶದಿಂದ ಗಾಂಜಾ ತಂದಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಇದರಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ಇದ್ದು, ತನಿಖೆ ನಡೆಸುತ್ತಿದ್ದೇವೆ” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.
ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿತರ ಬಳಿಯಿಂದ 65.039 ಕಿಲೋ ಗಾಂಜಾ, 20 ಲಕ್ಷ ರೂ. ಮೌಲ್ಯದ ಲಾರಿ, ನಗದು ಮತ್ತು ಮೊಬೈಲ್‌ಗಳನ್ನು ಸೇರಿ 72.21 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೊತ್ತುಗಳನ್ನು ಮಲ್ಪೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ.
ಕಾರ್ಕಳ ಎಎಸ್ಪಿ ಡಾ. ಹರ್ಷ ಪ್ರಿಯಂವದಾ ಅವರ ನಿರ್ದೇಶನದಲ್ಲಿ, ಉಡುಪಿ ಡಿವೈಎಸ್ಪಿ ಡಿ.ಟಿ. ಪ್ರಭು ಅವರ ಮಾರ್ಗದರ್ಶನದಲ್ಲಿ ಸೆನ್ ಅಪರಾಧ ಠಾಣೆಯ ಪ್ರಭಾರ ಇನ್ಸ್‌ಪೆಕ್ಟರ್ ರಾಮಚಂದ್ರ ನಾಯಕ್ ಹಾಗೂ ಠಾಣೆಯ ಸಿಬ್ಬಂದಿಗಳಾದ ಪ್ರವೀಣ್ ಕುಮಾರ್, ಪ್ರವೀಣ್ ಶೆಟ್ಟಿಗಾರ್, ಯತೀನ್ ಕುಮಾರ್, ರಾಘವೇಂದ್ರ, ದೀಕ್ಷಿತ್, ನಿಲೇಶ್, ಮಾಯಪ್ಪ, ಮುತ್ತಪ್ಪ, ಪವನ್ ಜೊತೆಗೆ ಮಲ್ಪೆ ಠಾಣೆಯ ಪ್ರವೀಣ್ ಮತ್ತು ಉಡುಪಿ ಟ್ರಾಫಿಕ್ ಠಾಣೆಯ ಶ್ರೀನಿವಾಸ್ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ಕೈಗೊಂಡಿತು.
ಆಂಧ್ರ–ಒರಿಸ್ಸಾ ಗಡಿಯಿಂದ ಗಾಂಜಾ ಸಾಗಾಟವಾಗಿದೆ ಎಂಬ ಮಾಹಿತಿ ತನಿಖೆಯಲ್ಲಿ ಲಭ್ಯವಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಹೇಳಿದ್ದಾರೆ.
ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಇನ್ನೂ ಕೆಲವರು ಸೇರಿಕೊಂಡಿರುವುದು ತಿಳಿದು ಬಂದಿದ್ದು, ಅವರ ವಿರುದ್ಧ ಕೂಡ ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.






