ಪ್ರಾಥಮಿಕ ಕೃಷಿ ಪತ್ತಿನ ಸಂಘ ಮತ್ತು ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣಾ ಪ್ರಚಾರಕ್ಕಾಗಿ ಸಚಿವ ಸತೀಶ್ ಜಾರಕಿಹೊಳಿ ಹುಕ್ಕೇರಿ ತಾಲೂಕಿನ ಮದಿಹಳ್ಳಿ ಗ್ರಾಮಕ್ಕೆ ಬಂದಾಗ, ಪಿಕೆಪಿಎಸ್ ಕಚೇರಿ ಎದುರು ಗೊಂದಲ ಉಂಟಾಯಿತು. ಈ ವೇಳೆ ಪಿಕೆಪಿಎಸ್ ಸದಸ್ಯ ಮಾರುತಿ ಸನದಿಗೆ ಪತ್ನಿ ಲಗಮವ್ವ ಹೊಡೆದಿದ್ದಾರೆ. ಸತೀಶ ಜಾರಕಿಹೊಳಿ ಅವರಿಗೆ ಬೆಂಬಲ ನೀಡಿದ್ದ ಗಂಡನಿಗೆ ರಸ್ತೆಯಲ್ಲಿಯೇ ತರಾಟೆ ತೆಗೆದುಕೊಂಡಿದ್ದಾಳೆ.
ಗಂಡಹೆಂಡತಿ ಜಗಳ ಬಗೆಹರಿಸಲು ಸಚಿವ ಸತೀಶ್ ಜಾರಕಿಹೊಳಿ ತಾವೇ ಹಸ್ತಕ್ಷೇಪ ಮಾಡಿದರೂ ಕೊನೆಗೆ ಸುಸ್ತಾಗಿ ಹಿಂತಿರುಗಿದ್ದಾರೆ. ಇದೇ ವೇಳೆ ಪಿಕೆಪಿಎಸ್ ಒಳಗೆ ಸಚಿವರು ತೆರಳಿದ ನಂತರ, ಪತ್ನಿಯನ್ನು ಜಾರಕಿಹೊಳಿ ಸಹೋದರರು ಬಲವಂತವಾಗಿ ಕರೆದೊಯ್ದಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಘಟನಾ ಸ್ಥಳಕ್ಕೆ ಮಾಜಿ ಸಂಸದ ರಮೇಶ ಕತ್ತಿ ಆಗಮಿಸಿದ ಕಾರಣ, ಎರಡು ಗುಂಪುಗಳ ನಡುವೆ ಗಲಾಟೆ ತೀವ್ರಗೊಂಡು ಕೈ ಕೈ ಮಿಲಾಯಿಸುವ ಹಂತ ತಲುಪಿತು.
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಗೆ ಇನ್ನೂ ಒಂದು ತಿಂಗಳು ಬಾಕಿಯಿದ್ದರೂ, ಹುಕ್ಕೇರಿ ತಾಲೂಕಿನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಮಾಜಿ ಸಂಸದ ರಮೇಶ್ ಕತ್ತಿ ನಡುವಿನ ಕಾಳಗ ಈಗಾಗಲೇ ತೀವ್ರಗೊಂಡಿದೆ. ಪ್ರತಿದಿನವೂ ನಡೆಯುತ್ತಿರುವ ಹೊಸ ರಾಜಕೀಯ ಬೆಳವಣಿಗೆಗಳು ಚುನಾವಣೆಯತ್ತ ಕುತೂಹಲ ಹೆಚ್ಚಿಸುತ್ತಿವೆ.
ಇದರ ನಡುವೆ, ಖಾನಾಪುರ ಕ್ಷೇತ್ರದಿಂದ ಸ್ಪರ್ಧೆಗೆ ಸಜ್ಜಾಗಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಹೋದರ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಈ ಕುರಿತು ಸಚಿವ ಸತೀಶ್ ಜಾರಕಿಹೊಳಿ ವಿಡಿಯೋ ಮೂಲಕ ಸ್ಪಷ್ಟಪಡಿಸಿದ್ದು, ಕಳೆದ ನಾಲ್ಕು–ಐದು ತಿಂಗಳಿಂದ ಚನ್ನರಾಜ ಹಟ್ಟಿಹೊಳಿ ಪ್ರಚಾರ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದರೂ, ಪ್ರಸ್ತುತ ಜಿಲ್ಲೆಯ ರಾಜಕೀಯ ಪರಿಸ್ಥಿತಿಯನ್ನು ಪರಿಗಣಿಸಿ ಸ್ಪರ್ಧೆಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಚನ್ನರಾಜ ಹಟ್ಟಿಹೊಳಿ ಅವರೊಂದಿಗೆ ಸುಧೀರ್ಘವಾಗಿ ಚರ್ಚಿಸಿದ ನಂತರ, ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಇದಕ್ಕೆ ಕಾರಣವೇನು ಎಂಬುದನ್ನು ನಂತರ ವಿವರವಾಗಿ ತಿಳಿಸುತ್ತೇನೆ ಎಂದಿದ್ದರು.
“ಸಚಿವ ಸತೀಶ್ ಜಾರಕಿಹೊಳಿ ಅವರು ನೀಡಿದ ಹೇಳಿಕೆಗೆ ನಾನು ಬದ್ಧನಿದ್ದೇನೆ. ಡಿಸಿಸಿ ಬ್ಯಾಂಕ್ ಚುನಾವಣೆಗಾಗಿ ಖಾನಾಪುರ ಕ್ಷೇತ್ರದಲ್ಲಿ ಕಳೆದ ನಾಲೈದು ತಿಂಗಳಿಂದ ಸಕ್ರಿಯವಾಗಿ ಕೆಲಸ ಮಾಡಿದ್ದೆವು. ಹಲವು ಪಿಕೆಪಿಎಸ್ಗಳಿಂದ ನಮಗೆ ಬೆಂಬಲ ಸಿಕ್ಕಿತ್ತು. ಆದರೆ ಜಿಲ್ಲೆಯ ಪ್ರಸ್ತುತ ರಾಜಕೀಯ ಪರಿಸ್ಥಿತಿ ಹಿನ್ನೆಲೆಯಲ್ಲಿ ಸತೀಶ್ ಜಾರಕಿಹೊಳಿ ಅವರೊಂದಿಗೆ ಚರ್ಚಿಸಿ, ಚುನಾವಣೆಗೆ ಸ್ಪರ್ಧಿಸದಿರುವ ನಿರ್ಧಾರಕ್ಕೆ ಬಂದಿದ್ದೇವೆ” ಈ ಬಗ್ಗೆ ಚನ್ನರಾಜ ಹಟ್ಟಿಹೊಳಿ ಪ್ರತಿಕ್ರಿಯಿಸಿರು.







1 thought on “ಬೆಳಗಾವಿ: ಸಚಿವ ಸತೀಶ್ ಜಾರಕಿಹೊಳಿಗೆ ಬೆಂಬಲಿಸಿದ ಪತಿಗೆ ಸಚಿವರ ಎದುರೇ ಪತ್ನಿಯಿಂದ ಬಿಸಿ ಬಿಸಿ ಏಟು!”