ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕು ಆಸ್ಪತ್ರೆಯ ಹೊಸ ಕಟ್ಟಡದ ಕಾಮಗಾರಿ ಜಾರಿಯಾಗದೆ ವಿಳಂಬವಾದ ಕಾರಣ, ಹಳೆಯ ಕಟ್ಟಡದ ಕಾರಿಡಾರ್ಗಳಲ್ಲಿ ಬೆಡ್ಗಳನ್ನು ಇಟ್ಟು ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಸಂಸದ ಬಸವರಾಜ ಬೊಮ್ಮಾಯಿ ರಾಜೀನಾಮೆ ನೀಡಿ ಖಾಲಿಯಾಗಿದ್ದ ಶಾಸಕರ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ, ಶಿಗ್ಗಾವಿ ತಾಲ್ಲೂಕು ಆಸ್ಪತ್ರೆಯ ಅಭಿವೃದ್ಧಿಯ ವಿಚಾರವನ್ನು ಕಾಂಗ್ರೆಸ್ ಮತ್ತು ಬಿಜೆಪಿ ಮುಖ್ಯ ಪ್ರಚಾರ ಅಸ್ತ್ರವನ್ನಾಗಿ ಬಳಸಿಕೊಂಡಿದ್ದವು. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿ 10 ತಿಂಗಳಾಗಿದ್ದು, ಆಸ್ಪತ್ರೆಯ ಹೊಸ ಕಟ್ಟಡದ ಕೆಲಸ ಮಾತ್ರ ಪೂರ್ಣಗೊಳ್ಳುತ್ತಿಲ್ಲ.
ಶಿಗ್ಗಾವಿ ಪಟ್ಟಣ ಮತ್ತು ತಾಲ್ಲೂಕು ಪ್ರದೇಶದಲ್ಲಿ ರೈತರು ಹೆಚ್ಚಾಗಿ ವಾಸವಾಗಿದ್ದು, ಯಾವುದೇ ಅನಾರೋಗ್ಯ ಕಂಡರೂ ಚನ್ನಮ್ಮ ವೃತ್ತದಲ್ಲಿರುವ 100 ಹಾಸಿಗೆಗಳ ತಾಲ್ಲೂಕು ಆಸ್ಪತ್ರೆಯನ್ನೇ ಅವಲಂಬಿಸುತ್ತಾರೆ. ಪ್ರಸ್ತುತ ಪ್ರತಿದಿನವೂ 50ರಿಂದ 80 ಮಂದಿ ಚಿಕಿತ್ಸೆಗೆ ಬರುವುದರಲ್ಲಿ, 10ರಿಂದ 20 ಮಂದಿ ಒಳರೋಗಿಗಳಾಗಿ ದಾಖಲಾಗುತ್ತಾರೆ. ತಾಲ್ಲೂಕು ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದ್ದು, ಮೇಲಿಂದ ಮೇಲೆ ಅಪಘಾತಗಳು ಸಂಭವಿಸುತ್ತಿವೆ. ಇಂಥ ಸಂದರ್ಭದಲ್ಲಿ ಗಾಯಾಳುಗಳನ್ನು ಸಹ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗುತ್ತಿದೆ.
ಈ ಕ್ಷೇತ್ರದ ಶಾಸಕ ಹಾಗೂ ನಂತರ ಮುಖ್ಯಮಂತ್ರಿ ಆಗಿದ್ದ ಬಸವರಾಜ ಬೊಮ್ಮಾಯಿ, ಉತ್ತಮ ಚಿಕಿತ್ಸೆ ಸಿಗುವಂತೆ ಶಿಗ್ಗಾವಿ ತಾಲ್ಲೂಕು ಆಸ್ಪತ್ರೆಯನ್ನು 100 ಹಾಸಿಗೆಗಳಿಂದ 250 ಹಾಸಿಗೆಗಳ ಮಟ್ಟಿಗೆ ವಿಸ್ತರಿಸಿದರು. ₹96.50 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ 2022ರ ಡಿಸೆಂಬರ್ 4ರಂದು ಶಿಲಾನ್ಯಾಸ ನೆರವೇರಿಸಿ, ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕೆಂದು ಗಡುವು ನೀಡಿದರು.
ಕಾಮಗಾರಿ ಆರಂಭವಾಗಿ ಮೂರು ವರ್ಷ ಕಳೆದರೂ ಕಟ್ಟಡ ನಿರ್ಮಾಣ ಮುಗಿಯದೇ ವಿಳಂಬವಾಗಿದೆ. ಗುತ್ತಿಗೆದಾರರು ಒಪ್ಪಂದದ ಅವಧಿ ಮೀರಿ, ಇನ್ನಷ್ಟು ಸಮಯ ನೀಡುವಂತೆ ಕೇಳುತ್ತಿದ್ದಾರೆ. ಆದರೆ ಹಳೆಯ ಕಟ್ಟಡದಲ್ಲಿ ವೈದ್ಯರು ರೋಗಿಗಳನ್ನು ಚಿಕಿತ್ಸೆ ನೀಡಲು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಲಾಯನ್ ಹಚ್ಚುತ್ತಿರುವ ವೈದ್ಯರು, ಅವರನ್ನು ಕಾರಿಡಾರ್ನಲ್ಲೇ ಮಲಗಿಸುತ್ತಿದ್ದಾರೆ. ಆಸ್ಪತ್ರೆಯ ಖಾಲಿ ಜಾಗದಲ್ಲೆಲ್ಲ ಬೆಡ್ಗಳನ್ನು ಹಾಕಲಾಗಿದೆ. ಜಾಗ ಕಿರಿದಾಗಿರುವುದರಿಂದ, ರೋಗಿಗಳ ಚಿಕಿತ್ಸೆಗೆ ತೊಂದರೆ ಉಂಟಾಗುತ್ತಿದೆ. ಗರ್ಭಿಣಿಯರು, ವೃದ್ಧರ ಪಾಡು ಹೇಳತೀರದ್ದಾಗಿದೆ. ಎಂಟು ವೈದ್ಯರ ಜಾಗದಲ್ಲಿ ಆರು ಮಂದಿ ಮಾತ್ರ ಕೆಲಸ ಮಾಡುತ್ತಿದ್ದಾರೆ. ವೈದ್ಯರು ಹಾಗೂ ಸಿಬ್ಬಂದಿ ಕೊರತೆಯೂ ಇದೆ.
“ಹೊಸ ಕಟ್ಟಡ ನಿರ್ಮಾಣಕ್ಕಾಗಿ, ಹಳೇ ಕಟ್ಟಡದ ಅರ್ಧ ಭಾಗವನ್ನು ನೆಲಸಮ ಮಾಡಲಾಗಿದೆ. ಇನ್ನರ್ಧ ಭಾಗದಲ್ಲಿ ಆಸ್ಪತ್ರೆ ನಡೆಯುತ್ತಿದ್ದು, 100 ಬೆಡ್ ಇರಿಸುವಷ್ಟು ಜಾಗವಿಲ್ಲ. ಹೀಗಾಗಿ, ಕಾರಿಡಾರ್ನಲ್ಲಿಯೇ ಬೆಡ್ ಹಾಕಿ ಚಿಕಿತ್ಸೆ ನೀಡುತ್ತಿದ್ದೇವೆ” ಎಂದು ವೈದ್ಯರೊಬ್ಬರು ತಿಳಿಸಿದರು.
“250 ಬೆಡ್ ಆಸ್ಪತ್ರೆಯ ಹೊಸ ಕಟ್ಟಡದ ನಿರ್ಮಾಣ ಕೆಲಸ ನಿಧಾನವಾಗಿ ನಡೆಯುತ್ತಿದೆ. ಡಿಸೆಂಬರ್ನವರೆಗೂ ಕಾಲಾವಕಾಶ ನೀಡುವಂತೆ ಗುತ್ತಿಗೆದಾರರು ಕೇಳುತ್ತಿದ್ದಾರೆ. ಆದರೆ, ಅದು ಸಾಧ್ಯವಾಗುವುದಿಲ್ಲ. ಆಸ್ಪತ್ರೆಯೆಂದರೆ ಕಟ್ಟಡ ಮಾತ್ರವಲ್ಲ, ಎಲ್ಲ ಸುಸಜ್ಜಿತ ವ್ಯವಸ್ಥೆ ಕಲ್ಪಿಸಬೇಕು. ಹೀಗಾಗಿ, ಎಲ್ಲ ಪೂರ್ಣಗೊಳ್ಳಲು ಇನ್ನೊಂದು ವರ್ಷವೇ ಬೇಕಾಗಬಹುದು” ಎಂದು ಆಡಳಿತಾಧಿಕಾರಿ ಹೇಳಿದರು.







1 thought on “ಹಾವೇರಿ: ಶಿಗ್ಗಾವಿ ಆಸ್ಪತ್ರೆ ಕಾಮಗಾರಿ ತಡ ಕಾರಿಡಾರ್ನಲ್ಲಿ ರೋಗಿಗಳಿಗೆ ಚಿಕಿತ್ಸೆ”