ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವುದನ್ನು ವಿರೋಧಿಸಿ ಹಿಂದೂ ಜಾಗರಣ ವೇದಿಕೆಯು ನೀಡಿದ ‘ಚಾಮುಂಡಿ ಚಲೋ’ ಕರೆ ಬೆಂಬಲಿಸಲು ಚಾಮುಂಡಿ ಬೆಟ್ಟಕ್ಕೆ ಹೊರಟಿದ್ದ ಪ್ರತಾಪ್ ಸಿಂಹರನ್ನು ಪೊಲೀಸರು ಕುರುಬಾರಹಳ್ಳಿ ವೃತ್ತದಲ್ಲೇ ತಡೆದರು. ಈ ವೇಳೆ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
“ನಿಮಗೆ ಮಾಡಲು ಕೆಲಸವಿಲ್ಲ, ನಿಮ್ಮನ್ನು ಬಿಜೆಪಿ ಕಿತ್ತು ಬಿಸಾಕಿದೆ. ಅಸ್ತಿತ್ವ ಉಳಿಸಿಕೊಳ್ಳಲು ಹೀಗೆಲ್ಲಾ ಮಾಡುತ್ತಿದ್ದಾರೆ” ಎಂದು ಕಾಂಗ್ರೆಸ್ ನವರು ಹೇಳುತ್ತಿದ್ದರಲ್ಲ? ಈ ಬಗ್ಗೆ ಏನಂತೀರಿ ಎಂದು ‘ವಾರ್ತಾಭಾರತಿ’ ಮೈಸೂರು ಜಿಲ್ಲಾ ವರದಿಗಾರ ಸತೀಶ್ ಕುಮಾರ್ ಎನ್.ಎಸ್. ಎಂದರು.
ಇದರಿಂದ ಕೊಪಗೊಂಡ ಪ್ರತಾಪ್ ಸಿಂಹ, “ಇಲ್ಲಿ ಯಾವನೊ ಒಬ್ಬ ಪತ್ರಕರ್ತನಿದ್ದಾನೆ ಸತೀಶ ಅಂತ. ಅವನ ಮಾತಿಗೆ ಮೂರು ಕಾಸಿನ ಬೆಲೆ ಕೊಡಲ್ಲ, ಅವನ ಪ್ರಶ್ನೆಯನ್ನು ನಾನು ತೆಗೆದುಕೊಳ್ಳಲ್ಲ” ಎಂದು ಮಾತನಾಡಿ ಅಪಮಾನಿಸಿದ್ದಾರೆ. ಮಾಜಿ ಪತ್ರಕರ್ತರೂ ಆಗಿರುವ ಮಾಜಿ ಸಂಸದ ಪ್ರತಾಪ್ ಸಿಂಹರ ಈ ವರ್ತನೆಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು “ಸಿಎಂ ಸಿದ್ದರಾಮಯ್ಯ ತಾಲಿಬಾನ್ ಸರ್ಕಾರ ನಡೆಸುತ್ತಿದ್ದಾರೆ. ಅವರಿಗೆ ತಾಲಿಬಾನಿ ಮನಸ್ಥಿತಿ ಇರುವುದರಿಂದಲೇ ಇಂದು ರಾಜ್ಯಕ್ಕೆ ಈ ಸ್ಥಿತಿ ಬಂದಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ತಾಯಿ ಭುವನೇಶ್ವರಿಗೆ ಅವಮಾನ ಮಾಡಿದವರನ್ನು ಅರಿಷಿಣ ಕುಂಕುಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದವರನ್ನು ಇಂದು ದಸರಾ ಉದ್ಘಾಟನೆಗೆ ಆಯ್ಕೆ ಮಾಡಲಾಗಿದೆ. ಈ ಮೂಲಕ ನಾಡ ಅದಿದೇವತೆ ಚಾಮುಂಡಿ ತಾಯಿಗೂ ಅಪಮಾನ ಮಾಡುವ ಕೆಲಸ ನಡೆದಿದೆ. ಕನ್ನಡದ ಬಗ್ಗೆ, ಕನ್ನಡ ನಾಡು-ನುಡಿ ಬಗ್ಗೆ ಗೌರವಿಲ್ಲದ, ಭುವನೇಶ್ವರಿ ತಾಯಿಯನ್ನು ಅವಮಾನಿಸಿದವರನ್ನು ದಸರಾ ಉದ್ಘಾಟನೆಗೆ ಕರೆತರುತ್ತಿದ್ದಾರೆ. ಬಾನು ಮುಷ್ತಾಕ್ ಮಸೀದಿಯಲ್ಲಿರುವ ಮುಲ್ಲಾ ರೀತಿ ಮಾತನಾಡಿದ್ದಾರೆ, ಈವರೆಗೂ ರಾಜ್ಯದ ಜನರ ಕ್ಷಮೆ ಕೇಳಿಲ್ಲ. ಸಿಎಂ ಸಿದ್ದರಾಮಯ್ಯನವರು ಬಾನು ಮುಷ್ತಾಕ್ ಅವರಿಗೆ ಕರೆದು ಬುದ್ಧಿ ಹೇಳಿ, ಕ್ಷಮೆ ಕೇಳ್ವಂತೆ ಹೇಳಿದ್ದರೆ ನಾವಿಂದು ಪ್ರತಿಭಟನೆ ಮಾಡುವ ಸ್ಥಿತಿ ಬರುತ್ತಿರಲಿಲ್ಲ” ಎಂದು ಕಿಡಿಕಾರಿದರು.
“ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಬೇಕು ಎಂಬುದಿದ್ದರೆ ನೀವು ನಿಮ್ಮ ಮನೆಯ ಕಾರ್ಯಕ್ರಮಗಳಿಗೋ, ಮಗನ, ಮೊಮ್ಮಗನ ಮದುವೆಗೋ ಕರೆದು ತಾಂಬೂಲ ಕೊಡಿ. ಅದನ್ನು ಬಿಟ್ಟು ನಾಡ ಹಬ್ಬವಾದ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿದ್ದೀರಿ” ಎಂದು ಆಕ್ರೋಶ ವ್ಯಕ್ತಪಡಿಸಿದರು.






