---Advertisement---

ಹಾವೇರಿ: ಐಐಎಫ್‌ಎಲ್‌ ನಕಲಿ ಅಪ್ಲಿಕೇಶನ್ ಬಲೆಗೆ ಸಿಕ್ಕ ಲೆಕ್ಕಾಧಿಕಾರಿ 75.42 ಲಕ್ಷ ನಷ್ಟ

On: September 10, 2025 12:11 PM
Follow Us:
ಹಾವೇರಿ: ‘ಐಐಎಫ್‌ಎಲ್‌’ ನಕಲಿ ಅಪ್ಲಿಕೇಶನ್ ಬಲೆಗೆ ಸಿಕ್ಕ ಲೆಕ್ಕಾಧಿಕಾರಿ, ₹75.42 ಲಕ್ಷ ನಷ್ಟ
---Advertisement---

ಹಣಕಾಸು ಸೇವಾ ವಲಯದಲ್ಲಿ ಪ್ರಸಿದ್ಧಿ ಪಡೆದಿರುವ ಐಐಎಫ್‌ಎಲ್ (ಇಂಡಿಯಾ ಇನ್ಫೊಲೈನ್ ಫೈನಾನ್ಸ್ ಲಿಮಿಟೆಡ್) ಹೆಸರಿನಲ್ಲಿ ನಕಲಿ ಆಪ್ ನಿರ್ಮಿಸಿ, ಜಿಲ್ಲೆಯ ಲೆಕ್ಕಾಧಿಕಾರಿಯಿಂದ ಒಟ್ಟು ₹75.42 ಲಕ್ಷ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.

ಜುಲೈ 13ರಿಂದ ಆಗಸ್ಟ್ 14ರವರೆಗೆ ನಡೆದ ವಂಚನೆ ಪ್ರಕರಣದ ಕುರಿತು ಲೆಕ್ಕಾಧಿಕಾರಿ ದೂರು ದಾಖಲಿಸಿದ್ದಾರೆ. ಹಾವೇರಿಯ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಾದ ನೇಮ್‌ಕುಮಾರ ಮತ್ತು ಸ್ನೇಹಾ ಶಾರದಾ ಅವರನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

“ಮುಂಬೈನಲ್ಲಿ ಪ್ರಧಾನ ಕಚೇರಿ ಹೊಂದಿರುವ ಐಐಎಫ್‌ಎಲ್‌, ದೇಶ ಹಾಗೂ ವಿದೇಶದಲ್ಲೂ ಹಣಕಾಸು ವ್ಯವಹಾರ ನಡೆಸುತ್ತಿದೆ. ಇದೇ ಕಂಪನಿಯ ಪ್ರತಿನಿಧಿಗಳೆಂದು ಲೆಕ್ಕಾಧಿಕಾರಿಯನ್ನು ಪರಿಚಯ ಮಾಡಿಕೊಂಡಿದ್ದ ಆರೋಪಿಗಳು, ಕಂಪನಿಯ ಹೆಸರು ಹೋಲುವ ರೀತಿಯಲ್ಲಿದ್ದ ಜಾಲತಾಣದ ಲಿಂಕ್ ಕಳುಹಿಸಿದ್ದರು. ನಂತರ, ನಕಲಿ ಆಯಪ್‌ವೊಂದನ್ನು ಇನ್‌ಸ್ಟಾಲ್ ಮಾಡಿಸಿದ್ದರು. ಬಳಿಕವೇ ಹಣ ಹೂಡಿಕೆ ಮಾಡಿಸಿಕೊಂಡು ವಂಚಿಸಿದ್ದಾರೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

“ರಾಣೆಬೆನ್ನೂರಿನ ನಿವಾಸಿಯಾದ ದೂರುದಾರ, ಲೆಕ್ಕದಲ್ಲಿ ಪಳಗಿದವರು. ತಮ್ಮದೇ ಸಂಸ್ಥೆಯೊಂದನ್ನು ರಚಿಸಿಕೊಂಡು, ವ್ಯಾಪಾರಿಗಳು ಹಾಗೂ ಕಂಪನಿಗಳಿಗೆ ಲೆಕ್ಕ ಪತ್ರಗಳ ಸೇವೆ ನೀಡುತ್ತಿದ್ದರು. ಅವರ ಕೆಲಸಕ್ಕೆ ಪತ್ನಿ ಸಹ ಸಹಕಾರ ನೀಡುತ್ತಿದ್ದಾರೆ. ಇಬ್ಬರೂ ಸೇರಿ ಕೆಲಸ ಮಾಡುತ್ತ, ಹಣ ಉಳಿತಾಯ ಮಾಡಿದ್ದರು. ಅದೇ ಹಣವನ್ನು ಈಗ ವಂಚಕರು ದೋಚಿದ್ದಾರೆ” ಎಂದು ಪೊಲೀಸರು ತಿಳಿಸಿದರು.

“ದೂರುದಾರರಿಗೆ ಐಐಎಫ್‌ಎಲ್‌ ಬಗ್ಗೆ ಹಾಗೂ ಆ ಕಂಪನಿಯ ಕಾರ್ಯವೈಖರಿಯ ಜ್ಞಾನವೂ ಇತ್ತು. ಇದನ್ನು ಹೇಗೋ ತಿಳಿದುಕೊಂಡಿದ್ದ ಆರೋಪಿಗಳು, ಅದೇ ಕಂಪನಿ ಹೆಸರಿನಲ್ಲಿ ವಂಚನೆ ಮಾಡಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ” ಎಂದರು.

“ದೂರುದಾರರ ಮೊಬೈಲ್‌ಗೆ ಜುಲೈ 13ರಂದು ನಾಲ್ಕು ಪ್ರತ್ಯೇಕ ನಂಬರ್‌ಗಳಿಂದ ಕರೆ ಮಾಡಿದ್ದ ಆರೋಪಿಗಳು, ತಾವು ಐಐಎಫ್‌ಎಲ್‌ ಪ್ರತಿನಿಧಿಗಳೆಂದು ಪರಿಚಯಿಸಿಕೊಂಡಿದ್ದರು. ಬಳಿಕವೇ ಐಐಎಫ್‌ಐ ಫೈನಾನ್ಸ್ ಹೆಸರಿನ ಎರಡು ಜಾಲತಾಣಗಳ ಲಿಂಕ್‌ ಕಳುಹಿಸಿದ್ದರು. ಐಐಎಫ್‌ಎಲ್‌ ವಿಐಪಿ ವೆಲ್ತ್ ಪಾಟ್ನರ್ ಗ್ರೂಪ್‌ನಲ್ಲಿ ಹಣ ಹೂಡಿಕೆ ಮಾಡಿದರೆ, ಬಹಳಷ್ಟು ಲಾಭ ಬರುವುದಾಗಿ ನಂಬಿಸಿದ್ದರು” ಎಂದು ಪೊಲೀಸರು ಹೇಳಿದರು.

“ಆರೋಪಿಗಳ ಮಾತು ನಂಬಿದ್ದ ದೂರುದಾರ, ಹೂಡಿಕೆ ಮಾಡಲು ಮುಂದಾಗಿದ್ದರು. ಅವಾಗಲೇ ಆರೋಪಿಗಳು, ಆಯಪ್‌ ಇನ್‌ಸ್ಟಾಲ್ ಮಾಡಿಸಿದ್ದರು. ಆರಂಭದಲ್ಲಿ ಸ್ವಲ್ಪ ಹಣವನ್ನು ದೂರುದಾರರು, ಆಯಪ್‌ಗೆ ಹಾಕಿದ್ದರು. ಆಯಪ್‌ನ ಡ್ಯಾಶ್‌ಬೋರ್ಡ್‌ನಲ್ಲಿ ಹೂಡಿಕೆ ಹಾಗೂ ಲಾಭದ ಹಣ ತೋರಿಸಿತ್ತು. ಹಣ ಹೆಚ್ಚಾಗಿದ್ದನ್ನು ಗಮನಿಸಿದ್ದ ಅವರು, ತಮ್ಮ ಹಾಗೂ ಪತ್ನಿಯ ವಿವಿಧ ಖಾತೆಗಳಿಂದ ಹಂತ ಹಂತವಾಗಿ ₹ 75.42 ಲಕ್ಷ ಹೂಡಿಕೆ ಮಾಡಿದ್ದರು. ಆದರೆ, ಹಣ ಡ್ರಾ ಮಾಡಿಕೊಳ್ಳಲು ಸಾಧ್ಯವಾಗಿರಲಿಲ್ಲ. ಆರೋಪಿಗಳು ಸಹ ತೆರಿಗೆ ತುಂಬಿದರೆ ಮಾತ್ರ ಹಣ ಬರುವುದಾಗಿ ಹೇಳಿ ದಿನದೂಡುತ್ತಿದ್ದರು” ಎಂದು ಪೊಲೀಸರು ತಿಳಿಸಿದರು.

“ಇತ್ತೀಚಿಗೆ ಐಐಎಫ್‌ಎಲ್‌ ಅಸಲಿ ಕಂಪನಿಯವರು, ತಮ್ಮ ಹೆಸರಿನಲ್ಲಿ ನಕಲಿ ಆಯಪ್‌ ಸೃಷ್ಟಿಯಾದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಜಾಹೀರಾತು ನೀಡಿದ್ದರು. ಅದನ್ನು ನೋಡಿದ್ದ ದೂರುದಾರರಿಗೆ ವಂಚನೆ ಬಗ್ಗೆ ಗೊತ್ತಾಗಿದೆ” ಎಂದು ಪೊಲೀಸರು ಮಾಹಿತಿ ನೀಡಿದರು.

ಸೈಬರ್ ವಂಚಕರು ಪ್ರತಿಷ್ಠಿತ ಕಂಪನಿಗಳ ಹೆಸರನ್ನು ಬಳಸಿಕೊಂಡು ನಕಲಿ ವೆಬ್‌ಸೈಟ್‌ ಹಾಗೂ ಆಪ್‌ಗಳನ್ನು ತಯಾರಿಸುತ್ತಿದ್ದಾರೆ. ಆಮಿಷ ನೀಡಿ ಜನರನ್ನು ವಂಚಿಸುವ ಘಟನೆಗಳು ಹೆಚ್ಚುತ್ತಿವೆ ಎಂದು ಹಾವೇರಿ ಸೆನ್ ಠಾಣೆಯ ಇನ್‌ಸ್ಪೆಕ್ಟರ್ (ಪ್ರಭಾರ) ಸಂತೋಷ ಪವಾರ ಎಚ್ಚರಿಕೆ ನೀಡಿದ್ದಾರೆ. ಜನರು ಇಂಥ ಆಪ್‌ಗಳ ಬಲೆಗೆ ಬೀಳಬಾರದು.

krutika naik

Krutika Naik is an editor and writer at Karnataka Stories, where she covers culture, local news, and inspiring voices from across the state. With a passion for storytelling and a keen eye for detail, Krutika brings real stories to life—one article at a time.

Join WhatsApp

Join Now

RELATED POSTS

Leave a Comment