ಬಳ್ಳಾರಿಯ ನಗರದ ಕಮೇಲ ರಸ್ತೆಯ ಸಿ.ಎಂ ಬೀದಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದ ಶಿಕ್ಷಕಿ ಸುಜಾತಾ ತಾಡಿಪತ್ರಿ ಅವರು ನಿವೃತ್ತಿಯಾಗಿ 11 ವರ್ಷಗಳಾದರೂ, ಅದೇ ಶಾಲೆಯಲ್ಲಿ ನಿರಂತರವಾಗಿ ಪಾಠ ಮಾಡುತ್ತಿದ್ದಾರೆ. ಈ ಅವಧಿಯಲ್ಲಿ ಅವರು ಒಂದು ದಿನವೂ ರಜೆ ತೆಗೆದುಕೊಂಡಿಲ್ಲ, ಯಾವುದೇ ಸಂಬಳ ಅಥವಾ ಗೌರವಧನವನ್ನೂ ಸ್ವೀಕರಿಸಿರುವುದಿಲ್ಲ.
1954ರಲ್ಲಿ ಜನಿಸಿದ ಸುಜಾತಾ ಅವರು, ಕಲಬುರಗಿಯಲ್ಲಿ ಟಿಸಿಎಚ್ ಪೂರ್ಣಗೊಳಿಸಿ 1974ರಲ್ಲಿ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನಲ್ಲೇ ಶಿಕ್ಷಕಿಯಾಗಿ ತಮ್ಮ ವೃತ್ತಿ ಆರಂಭಿಸಿದರು. ಬಳಿಕ ಕಂಬ್ಳಿ ಬಜಾರ್, ಹರಗಿನಡೋಣಿ ಹಾಗೂ ಕಮ್ಮರಚೇಡು ಶಾಲೆಗಳಲ್ಲಿ ಸೇವೆ ಸಲ್ಲಿಸಿದ ಅವರು, 2014ರಲ್ಲಿ ಕಮ್ಮರಚೇಡು ಶಾಲೆಯಿಂದ ನಿವೃತ್ತಿ ಪಡೆದರು. ಆದರೆ ನಿವೃತ್ತಿಯ ಮರುದಿನವೇ ಕಮೇಲ ರಸ್ತೆಯ ಸರ್ಕಾರಿ ಶಾಲೆಗೆ ತೆರಳಿ ಮಕ್ಕಳಿಗೆ ಪಾಠ ಮಾಡತೊಡಗಿದರು.
‘ನಾನು ಸರ್ಕಾರಿ ಶಾಲೆಯಲ್ಲಿ ಮಾತ್ರ ಪಾಠ ಮಾಡುತ್ತೇನೆ. ಇಲ್ಲಿ ಬರುವವರೆಲ್ಲ ಬಡ ಮಕ್ಕಳೇ. ಬಡವರಿಗೆ ನನ್ನ ಕೈಲಾದ ಸೇವೆ ನೀಡಬೇಕು ಎಂಬ ಕಾರಣಕ್ಕೆ ಉಚಿತವಾಗಿ ಪಾಠ ಮಾಡುತ್ತೇನೆ. ಹೀಗೆ ಮಾಡುವುದರಿಂದ ನಾನು ನಿತ್ಯ ಚಟುವಟಿಕೆಯಲ್ಲಿ ಇರುತ್ತೇನೆ’ ಎಂದು ಸುಜಾತಾ ಹೇಳಿದರು.
‘ಸುಜಾತಾ ಅವರು ಸದ್ಯ ಪತಿ ಮತ್ತು ಸಹೋದರನ ಜೊತೆಗೆ ನಗರದ ಸತ್ಯನಾರಾಯಣ ಪೇಟೆಯ ಬಾಡಿಗೆ ಮನೆಯಲ್ಲಿ ನೆಲಸಿದ್ದಾರೆ. ಪಿಂಚಣಿ ಹಣದಲ್ಲಿ ಬದುಕು ನಡೆಸುತ್ತಿದ್ದಾರೆ. ಶಾಲೆಗೆ ನಿತ್ಯ ನಡೆದುಕೊಂಡು ಬರುತ್ತಾರೆ. ಶಾಲೆಯ ಸಮಾರಂಭಗಳಿಗೆ ತಮ್ಮ ಪಾಲಿನ ಹಣ ನೀಡುತ್ತಾರೆ. ಸ್ವಾಭಿಮಾನಿಯಾದ ಸುಜಾತಾ ಅವರು ಯಾರಿಂದಲೂ ಕಿಂಚಿತ್ತು ನೆರವೂ ಅಪೇಕ್ಷಿಸುವುದಿಲ್ಲ’ ಎಂದು ಶಾಲೆಯ ಶಿಕ್ಷಕರು ಹೇಳಿದರು.
“ನಿವೃತ್ತಿಯಿಂದ ಇಂದಿನವರೆಗೆ ಸುಜಾತಾ ಮ್ಯಾಡಂ ಶಾಲೆಗೆ ಬಾರದ ದಿನವೇ ಇಲ್ಲ. ಅವರು ನಮಗಿಂತ ಮೊದಲೇ ಹಾಜರಾಗುತ್ತಾರೆ, ಮತ್ತು ಎಲ್ಲರೂ ಹೋದ ನಂತರ ಮಾತ್ರ ಶಾಲೆಯಿಂದ ತೆರಳುತ್ತಾರೆ” ಎಂದು ಮುಖ್ಯೋಪಾಧ್ಯಾಯ ಪೊಂಪನಗೌಡ ತಿಳಿಸಿದ್ದಾರೆ.
ನಿವೃತ್ತಿ ನಂತರವೂ ಮಕ್ಕಳಿಗೆ ಜ್ಞಾನ ಹಂಚುವ ಬಳ್ಳಾರಿಯ ಸುಜಾತಾ ಟೀಚರ್: ಸರ್ಕಾರಿ ಶಾಲೆಯಲ್ಲಿ ಉಚಿತ ತರಗತಿಗಳು..
By krutika naik
On: September 7, 2025 12:49 PM
---Advertisement---






