ನಕಲಿ ಕೂದಲು ಕಸಿ ಕ್ಲಿನಿಕ್‌ಗಳ ಮೇಲೆ ಗುರುವಾರ ಆರೋಗ್ಯ ಇಲಾಖೆ ದಾಳಿ ನಡೆಸಿ, ಅನುಮತಿ ಇಲ್ಲದ ಕೇಂದ್ರಗಳನ್ನು ಮುಚ್ಚಿ ಹಾಕಿದ್ದಾರೆ. ಈ ಸಂದರ್ಭದಲ್ಲಿ ಉಪಕರಣಗಳನ್ನು ವಶಪಡಿಸಿಕೊಂಡು, ಪ್ರಕರಣ ದಾಖಲಿಸಿ ನೋಟಿಸ್ ನೀಡಿದ್ದಾರೆ.
ಭಾರತೀಯ ಚರ್ಮ, ರತಿ ಹಾಗೂ ಕುಷ್ಠರೋಗ ತಜ್ಞರ ಸಂಘ ನೀಡಿದ ದೂರು ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರ ನಿರ್ದೇಶನದಂತೆ ಈ ದಾಳಿ ನಡೆದಿದೆ. ಈಗಾಗಲೇ 3 ಕ್ಲಿನಿಕ್‌ಗಳಿಗೆ ಬೀಗ ಬಿದ್ದಿದ್ದು, ಉಳಿದ 12 ಅನುಮತಿ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದ ಕೇಂದ್ರಗಳ ಮೇಲೆ ಏಕಕಾಲದಲ್ಲಿ ಕ್ರಮ ಜರುಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಒಟ್ಟು 15 ತಂಡಗಳನ್ನು ರಚಿಸಿ ಈ ದಾಳಿಯಲ್ಲಿ ಪಾಲ್ಗೊಂಡಿತ್ತು. ಶಾಮನೂರು ರಸ್ತೆ, ರಾಮ್ ಅಂಡ್ ಕೊ ವೃತ್ತ, ಎಂಸಿ ಕಾಲೋನಿ, ಜೀವನ್ ಭೀಮಾ ನಗರ, ಪಿ.ಜೆ. ಬಡಾವಣೆ, ಕುವೆಂಪು ನಗರ, ವಿದ್ಯಾನಗರ ಹಾಗೂ ದೇವರಾಜ ಅರಸು ಬಡಾವಣೆ ಸೇರಿದಂತೆ ಅನೇಕ ಕಡೆಗಳಲ್ಲಿ ದಾಳಿ ನಡೆದಿದೆ.
ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆಯಡಿ (KPME) ಪರವಾನಗಿ ಪಡೆಯುವುದು ಎಲ್ಲಾ ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ಕಡ್ಡಾಯವಾಗಿದೆ. ದಾಳಿ ಸಂದರ್ಭದಲ್ಲಿ ಅಗತ್ಯ ದಾಖಲೆಗಳನ್ನು ನೀಡದ ಕೆಲ ಕ್ಲಿನಿಕ್‌ಗಳನ್ನು ಅಧಿಕಾರಿಗಳು ತಕ್ಷಣವೇ ಮುಚ್ಚಿದ್ದಾರೆ. ಈ ಕುರಿತು ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿ ಸಂಬಂಧಿತ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್. ಷಣ್ಮುಖಪ್ಪ ತಿಳಿಸಿದ್ದಾರೆ.
ಕೇಶ ಕಸಿ ಕ್ಲಿನಿಕ್‌ಗಳಲ್ಲಿ ಚಿಕಿತ್ಸೆಗಾಗಿ 50 ಸಾವಿರದಿಂದ 1 ಲಕ್ಷ ರೂ.ವರೆಗೆ ದರ ನಿಗದಿಪಡಿಸಲಾಗುತ್ತಿದ್ದು, ಹೆಚ್ಚಿನ ಕ್ಲಿನಿಕ್‌ಗಳಲ್ಲಿ ಚರ್ಮರೋಗ ತಜ್ಞರಿಲ್ಲದೆ ಬಿಎಎಂಎಸ್ ವೈದ್ಯರು, ನರ್ಸ್‌ಗಳು ಮತ್ತು ಅರೆ ವೈದ್ಯಕೀಯ ಸಿಬ್ಬಂದಿಯೇ ಶಸ್ತ್ರಚಿಕಿತ್ಸೆ ನಡೆಸುತ್ತಿರುವುದು ಪತ್ತೆಯಾಗಿದೆ. ವೈದ್ಯರ ವಿವರಗಳು ಹಾಗೂ ಚಿಕಿತ್ಸಾ ಶುಲ್ಕದ ಮಾಹಿತಿ ಪ್ರದರ್ಶಿಸದಿರುವುದು ಗಮನಕ್ಕೆ ಬಂದಿದ್ದು, ಎಂಬಿಬಿಎಸ್ ವೈದ್ಯರ ಅನುಪಸ್ಥಿತಿಯಲ್ಲಿ ಅನಧಿಕೃತವಾಗಿ ಅರಿವಳಿಕೆ ನೀಡಲಾಗುತ್ತಿತ್ತು. ತಲೆ ಮತ್ತು ಮುಖದ ಮೇಲೆ ನಡೆಯುವ ಇಂತಹ ಚಿಕಿತ್ಸೆಯಿಂದ ಮಿದುಳಿಗೆ ಅಪಾಯ ಉಂಟಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.






